ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ
ಕಡೂರು: ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಜಾತಿ ನಿಂದನೆ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಸಾಂಖ್ಯಿಕ ನಿರೀಕ್ಷಕ ಇಕ್ಬಾಲ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಹೇಳಿದರು.
ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಚೇರಿ ಕಾರ್ಯನಿರ್ವಹಣೆಯಲ್ಲಿ ತಹಸೀಲ್ದಾರ್ ಕಿರುಕುಳ ನೀಡುತ್ತಿದ್ದಾರೆ, ಹಣ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ ಇವರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಇಕ್ಬಾಲ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ ಈ ಆರೋಪ ಸುಳ್ಳು ಎಂದು ತಿಳಿಸಿದ್ದಾರೆ.
ತಾಲೂಕು ಕಚೇರಿ ಆಡಳಿತದ ಮುಖ್ಯಸ್ಥೆಯಾಗಿ ಯಾವುದೇ ನೌಕರರಿಗೆ ಕಿರುಕುಳ ನೀಡಿಲ್ಲ. ಸಾರ್ವಜನಿಕರ ಹಿತದೃಷ್ಠಿಯಿಂದ ಕಾರ್ಯ ನಿರ್ವಹಣೆಯಲ್ಲಿ ಲೋಪಕಂಡು ಬಂದರೆ ಕೂಡಲೇ ಅಂತಹ ನೌಕರರಿಗೆ ಪ್ರಶ್ನಿಸಿ ಎಚ್ಚರಿಕೆ ನೀಡುವುದನ್ನು ಕಿರುಕುಳ ಎನ್ನಲಾಗದು. ಇಕ್ಬಾಲ್ ಕಾರ್ಯನಿರ್ವಹಿಸುತ್ತಿದ್ದ ಜನನ ಮರಣ ಶಾಖೆ ಸಾಂಖ್ಯಿಕ ಇಲಾಖೆಯಲ್ಲಿ ಹಲವಾರು ಬಾರಿ ಲೋಪ ಎಸಗಿರುವ ಬಗ್ಗೆ ಕಳೆದ ಒಂದೂವರೆ ವರ್ಷದಲ್ಲಿ ಸಾಕಷ್ಟು ದೂರುಗಳು ಕೇಳಿ ಬಂದಿವೆ ಎಂದು ತಿಳಿಸಿದರು.
ಈ ಕುರಿತು ಅರ್ಜಿದಾರರೊಬ್ಬರು ತಾಲೂಕಿನ ಸಾಂಖ್ಯಿಕ ಅಧಿಕಾರಿ ಬೇಜಾವಬ್ದಾರಿ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಚೇರಿಗೆ ದೂರು ನೀಡಿದ್ದಾರೆ. ಹಾಗೂ ಯಾವುದೇ ಅನುಮತಿ ಪಡೆಯದೇ ಕರ್ತವ್ಯಕ್ಕೆ ಗೈರು ಹಾಜರಾಗುವುದು, ಅಧಿಕಾರಿಗಳ ಅನುಮತಿಯಿಲ್ಲದೇ ಇಬ್ಬರು ಖಾಸಗಿಯಾಗಿ ಸಹಾಯಕರನ್ನು ನೇಮಿಸಿಕೊಂಡಿರುವುದು, ಜನನ ಮತ್ತು ಮರಣ ಪತ್ರಗಳ ಅವಶ್ಯಕತೆಗಾಗಿ ಬರುವ ಸಾರ್ವಜನಿಕರ ಜತೆ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಹಲವಾರು ದೂರುಗಳಿದ್ದವು. ಈ ಬಗ್ಗೆ ಅವರಿಗೆ ಕಾರಣ ಕೇಳಿ ನೋಟೀಸ್ ಕೂಡ ನೀಡಲಾಗಿತ್ತು. ಅದಕ್ಕೆ ಅವರು ಸಮರ್ಪಕ ಉತ್ತರವನ್ನೂ ನೀಡದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಹೇಳಿದರು.
ಸಾರ್ವಜನಿಕ ಮತ್ತು ಆಡಳಿತ ಹಿತದೃಷ್ಟಿಯಿಂದ ಬೇರೆ ಸಾಂಖ್ಯಿಕ ಅಧಿಕಾರಿ ನೇಮಿಸುವಂತೆ ಪತ್ರ ಬರೆಯಲಾಗಿತ್ತು. ಈ ಹಿನ್ನಲೆಯಲ್ಲಿ ೆ.11ರಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ಬೆಂಗಳೂರಿನ ಸಾಂಖ್ಯಿಕ ನಿರ್ದೇಶನಾಲಯಕ್ಕೆ ಇಕ್ಬಾಲ್ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಿದ ಬೆನ್ನಲ್ಲೇ ಕಡೂರು ತಾಲೂಕು ಕಚೇರಿಯಿಂದ ಬಿಡುಗಡೆಗೊಳಿಸಲಾಗಿದೆೆ ಎಂದು ಸ್ಪಷ್ಟನೆ ನೀಡಿದರು.
ಇದನ್ನೆ ಕಿರುಕುಳ ಎಂದು ಇಕ್ಬಾಲ್ ಸುಳ್ಳು ಆರೋಪ ಮಾಡುವ ಮೂಲಕ ನಮ್ಮನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾರೆ. ನಾನು ಯಾವುದೇ ನೌಕರರಿಂದ ಹಣ ಕೇಳಿಲ್ಲ. ಹೀಗೆ ಸುಳ್ಳು ಆರೋಪ ಮಾಡಿರುವುದರಿಂದ ಅಧಿಕಾರಿಗಳ ಬಗ್ಗೆ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಈ ಪ್ರಕರಣದ ಬಗ್ಗೆ ಪೂರ್ಣ ತನಿಖೆ ನಡೆಸಬೇಕು. ನನ್ನ ಮೇಲೆ ಸುಳ್ಳು ಆರೋಪ ಮಾಡಿರುವ ಕುರಿತು ಕಡೂರು ಠಾಣೆಯಲ್ಲಿ ದೂರು ನೀಡಲಾಗಿದೆ ಎಂದರು.