(ಸಾಂದರ್ಭಿಕ ಚಿತ್ರ )ಶೃಂಗೇರಿ ಜಗದ್ಗುರುಗಳಿಂದ ಚಾತುರ್ಮಾಸ್ಯ ವ್ರತ ಸಂಕಲ್ಪಕ್ಕೂ ಮುನ್ನ ಭಗವಾನ್ ಶ್ರೀ ವೇದವ್ಯಾಸರಿಗೆ ನೆರವೇರಿಸುವ ವಿಶೇಷ ಪೂಜೆ.
- ಸೆ.26ಕ್ಕೆ ವ್ರತ ಸಂಪನ್ನ
- ಉಭಯ ಗುರುಗಳ ಸಾನ್ನಿಧ್ಯ
ಶೃಂಗೇರಿ: ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಜು.29ರಂದು ಗುರುನಿವಾಸದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದಾರೆ. ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರು 52ನೇ ವರ್ಷದ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದಾರೆ.
ಗುರುಪೂರ್ಣಿಮೆ ಎಂದು ಕರೆಯಲ್ಪಡುವ ಆಷಾಢ ಮಾಸದ ಹುಣ್ಣಿಮೆ ಪವಿತ್ರ ದಿನವಾಗಿದ್ದು, ಚಾತುರ್ಮಾಸ್ಯ ಸೆ.26ರಂದು ಸಮಾಪ್ತಿಯಾಗಲಿದೆ. ಚಾತುರ್ಮಾಸ್ಯ ಸಂದರ್ಭದಲ್ಲಿ ಗುರುನಿವಾಸದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಜು.29ರಂದು ವ್ಯಾಸಪೂಜೆ, ಚಾತುರ್ಮಾಸ್ಯ ವ್ರತ, ಜು.30ರಂದು ಉತ್ತರ ಪೂಜೆ ನೆರವೇರಲಿದೆ. ಆ.9ರ ಏಕಾದಶಿ ಮತ್ತು ಶ್ರಾವಣ ಸೋಮವಾರ ವಿಶೇಷ ಪೂಜೆ ನಡೆಯಲಿದೆ. ಆ.21ರಂದು ಶ್ರೀ ವರಮಹಾಲಕ್ಷ್ಮೀ ವ್ರತ, ಆ.24 ಹಾಗೂ 31ರಂದು ಶ್ರಾವಣ ಸೋಮವಾರ ಪೂಜೆ ಜರುಗಲಿದೆ.
ಸೆ.4ರಂದು ಶ್ರೀಕೃಷ್ಣ ಜನ್ಮಾಷ್ಟಮಿ, 14ರಂದು ಶ್ರೀ ವರಸಿದ್ಧಿ ವಿನಾಯಕ ವ್ರತ ಹಾಗೂ ಶ್ರೀ ಮಹಾಗಣಪತಿ ವಾಖ್ಯಾರ್ಥ ಸಭೆ, 20ಕ್ಕೆ ಶ್ರೀ ಕೇದಾರನಾಥ ಪೂಜೆ, 22 ವಾಮನ ಜಯಂತಿ, 25 ಶ್ರೀ ಅನಂತಪದ್ಮನಾಭ ವ್ರತ, 26 ಶ್ರೀ ಉಮಾಮಹೇಶ್ವರಿ ವ್ರತ ಹಾಗೂ ಚಾತುರ್ಮಾಸ್ಯ ವ್ರತ ಮುಕ್ತಾಯ, 27ಕ್ಕೆ ಶ್ರೀ ಮಹಾಗಣಪತಿ ವ್ಯಾಖ್ಯಾರ್ಥ ಸಭೆ ಸಮಾಪನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಆ.17ರಂದು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರ 34ನೇ ವರ್ಧಂತಿ ಮಹೋತ್ಸವ ನಡೆಯಲಿದೆ. ವರ್ಧಂತಿ ಮಹೋತ್ಸವ ಅಂಗವಾಗಿ ಅ.13 ಮಹಾರುದ್ರ ಯಾಗದ ಸಂಕಲ್ಪ, 16ರಂದು ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ, 17ರಂದು ಗುರುನಿವಾಸದಲ್ಲಿ ಬೆಳಗ್ಗೆ 7 ಗಂಟೆಗೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರ ಅಹ್ನಿಕ ದರ್ಶನ, ಬೆಳಗ್ಗೆ 10 ಗಂಟೆಗೆ ಅನುಗ್ರಹ ಭಾಷಣ, ಮಧ್ಯಾಹ್ನ 11.30ಕ್ಕೆ ಮಹಾರುದ್ರಯಾಗದ ಪೂರ್ಣಾಹುತಿ, 12 ಗಂಟೆಗೆ ಶ್ರಾವಣ ಸೋಮವಾರ ಪೂಜೆ, ರಾತ್ರಿ 8.30ಕ್ಕೆ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ವಿಶೇಷ ಪೂಜೆ ನಡೆಯಲಿದೆ.
ಅನಾದಿ ಕಾಲದಿಂದಲೂ ಬ್ರಹ್ಮವಿದ್ಯೆ ಉಪದೇಶಿಸಿದ ಗುರುಪರಂಪರೆಗೆ ಪೂಜೆ ಸಲ್ಲಿಸಲಾಗುತ್ತಿದೆ. ಈ ಆಚಾರ್ಯ ಪರಂಪರೆಯಲ್ಲಿ ಶ್ರೀ ವೇದವ್ಯಾಸರು ಅಗ್ರಗಣ್ಯರು. ಅವರು ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದಷ್ಟೇ ಅಲ್ಲದೆ ಪಂಚಮವೇದ ಎಂದು ಕರೆಯಲ್ಪಡುವ ಮಹಾಭಾರತ, ಅಷ್ಟಾದಶ ಮಹಾಪುರಾಣ, ಉಪನಿಷತ್ ಪ್ರತಿಪಾದ್ಯವಾದ ಜೀವಬ್ರಹ್ಮೈಕ್ಯವನ್ನು ಯುಕ್ತಿಗಳಿಂದ ಪ್ರತಿಪಾದಿಸುವ ಬ್ರಹ್ಮಸೂತ್ರಗಳನ್ನು ರಚಿಸಿದರು. ಚಾತುರ್ಮಾಸ್ಯ ಸಂಕಲ್ಪ ಕೈಗೊಳ್ಳುವ ಮುನ್ನ ಭಗವಾನ್ ವೇದವ್ಯಾಸರಿಗೆ ಯತಿವರ್ಯರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಹುಣ್ಣಿಮೆಯನ್ನು ವ್ಯಾಸ ಪೂರ್ಣಿಮೆ ಎಂದು ಕರೆಯಲಾಗುತ್ತದೆ.