ಅಜ್ಜಂಪುರದ ಡಣಾಯಕಪುರದಲ್ಲಿ ಗ್ರಾಮ ದೇವತೆಗಳಾದ ಶ್ರೀ ಆದಿಶಕ್ತಿ ದೇವಿ, ಶ್ರೀ ಆಂಜನೇಯಸ್ವಾಮಿ ಹಾಗೂ ಶ್ರೀ ಶಿವಲಿಂಗೇಶ್ವರ ಸ್ವಾಮಿ ಕೆಂಡೋತ್ಸವ ನಡೆಯಿತು. 
ಚಿಕ್ಕಮಗಳೂರು

ಶ್ರೀ ಶಿವಲಿಂಗೇಶ್ವರ ಸ್ವಾಮಿ ಕೆಂಡೋತ್ಸವ ಸಂಪನ್ನ

ತರೀಕೆರೆ: ಅಜ್ಜಂಪುರ ತಾಲೂಕಿನ ಡಣಾಯಕಪುರದಲ್ಲಿ ಗ್ರಾಮ ದೇವತೆಗಳಾದ ಶ್ರೀಆದಿಶಕ್ತಿ ದೇವಿ, ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ಶಿವಲಿಂಗೇಶ್ವರ ಸ್ವಾಮಿ ಅವರ ಕೆಂಡೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಕಳೆದ ಮೂರು ದಿನಗಳಿಂದ ದೇಗುಲ ಅಲಂಕಾರ, ಶುದ್ಧಿ ಕಾರ್ಯ, ಸೋಮವಾರ ರಾತ್ರಿ ಶ್ರೀ ಆದಿಶಕ್ತಿ ದೇವಿಗೆ ಮದುವಣಗಿತ್ತಿ ಶಾಸ್ತ್ರ ನಡೆಸಿ ಅಡ್ಡಪಲ್ಲಕ್ಕಿ ಉತ್ಸವದೊಂದಿಗೆ ಕೆಂಡೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ರಾಜ ಬೀದಿಗಳಲ್ಲಿ ನಡೆದ ಅಡ್ಡಪಲ್ಲಕ್ಕಿ ಉತ್ಸವಕ್ಕೆ ವೀರಗಾಸೆ, ಡೊಳ್ಳು ಕುಣಿತ, ಸಿಡಿಮದ್ದು ಮೆರಗು ನೀಡಿದವು. ಮಂಗಳವಾರ ಬೆಳಗಿನ ಜಾವ ಗ್ರಾಮದ ಸುತ್ತಮುತ್ತ ಅಷ್ಟ ದಿಗ್ಭಂದನ ಎಡೆ ಹಾಕಿ ಕೆಂಡದ ಗುಂಡಿಗೆ ರುದ್ರಬತ್ತಿ ಹಚ್ಚುವ ಮೂಲಕ ಗಂಗಾ ಪೂಜೆಯೊಂದಿಗೆ ಕೆಂಡೋತ್ಸವ ಆರಂಭಿಸಲಾಯಿತು. ನೂರಾರು ಭಕ್ತರು ಕೊಂಡ ಹಾಯ್ದು ಭಕ್ತಿ ಸಮರ್ಪಿಸಿದರು.
ದೇವರಿಗೆ ಮಹಾ ಮಂಗಳಾರತಿ ನೆರವೇರಿಸಿದ ನಂತರ ವಿವಿಧ ಕಡೆಯಿಂದ ಆಗಮಿಸಿದ್ದ ಭಕ್ತರ ಜತೆ ಮಾಜಿ ಶಾಸಕ ಡಿ.ಎಸ್.ಸುರೇಶ್ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು.