ತರೀಕೆರೆ ಕಾಳಿದಾಸ ನಗರದಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿಯ ರಥೋತ್ಸವ ನಡೆಯಿತು.  
ಚಿಕ್ಕಮಗಳೂರು

ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ರಥೋತ್ಸವ

ಪ್ರಮುಖ ಮುಖ್ಯಾಂಶಗಳು

  • ದೇವರಿಗೆ ವಿವಿಧ ಅಭಿಷೇಕ
  • ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರು

ತರೀಕೆರೆ: ಪಟ್ಟಣದ ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಹಿನ್ನೆಲೆಯಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ದೇಗುಲದಲ್ಲಿ ಬೆಳಗ್ಗೆ ಮೂಲ ದೇವರಿಗೆ ವಿವಿಧ ಅಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 6ರಿಂದ ಶಿವನಿ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಮಠದ ಕುಲಗುರು ನವೀನ್ ಒಡೆಯರ್ ನೇತೃತ್ವದಲ್ಲಿ ನೂತನ ರಥಕ್ಕೆ ಶುದ್ಧಿಪೂರ್ವಕ, ಗಂಗಾಪೂಜೆ, ಸ್ವಸ್ತಿ ಪುಣ್ಯಾಹವಾಚನ, ನಂದಿ ಸಮಾರಾಧನೆ, ರಕ್ಷಾಬಂಧನ, ಪರಿವಾರ ದೇವತಾ ಸಹಿತ ಪ್ರಧಾನ ಶ್ರೀ ಗುರು ರೇವಣಸಿದ್ದೇಶ್ವರ ಆರಾಧನೆ ಮತ್ತು ಗಣಹೋಮ, ದಶದಿಕ್ಪಾಲಕರ ಸಹಿತ ರಥಾಂಗ ಹೋಮ, ಪುಣ್ಯಾಹುತಿ, ಬಲಿಸಮರ್ಪಣೆ ಇತರ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಬೆಳಗ್ಗೆ 11.20ಕ್ಕೆ ಹೊಸದುರ್ಗ ಕನಕ ಗುರುಪೀಠ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ನೂತನ ರಥಕ್ಕೆ ಕಳಸಾರೋಹಣ ನೆರವೇರಿಸಿದರು. ರಾಜ್ಯ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರು 11.45ರ ಹೊತ್ತಿಗೆ ಪ್ರಥಮ ವರ್ಷದ ರಥೋತ್ಸವಕ್ಕೆ ಚಾಲನೆ ನೀಡಿದರು.

ಪಟ್ಟಣ, ಜಿಲ್ಲೆ ಮತ್ತು ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ತೇರು ಎಳೆದರು. ಭವ್ಯ ರಥದ ಮೇಲೆ ನಿಂಬೆ, ಬಾಳೆಹಣ್ಣು, ಹೂವು ಇತರ ಪೂಜಾ ಪರಿಕರ ತೂರಿ ಭಕ್ತಿ ಸಮರ್ಪಿಸಿದರು.

ಕಳಸಾರೋಹಣದ ನಂತರ ಮೊದಲ ವರ್ಷದ ರಥೋತ್ಸವದ ಧ್ವಜ ಹರಾಜು ಪ್ರಕ್ರಿಯೆ ನಡೆಸಲಾಯಿತು. ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ರಮೇಶ್ ರಥದ ಧ್ವಜವನ್ನು 2.01 ಲಕ್ಷ ರೂ.ಗೆ ಹರಾಜಿನ ಮೂಲಕ ಪಡೆದುಕೊಂಡರು.

ಶಾಸಕ ಜಿ.ಎಚ್.ಶ್ರೀನಿವಾಸ್, ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ರಮೇಶ್, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ನರೇಂದ್ರ, ಟಿ.ಎಸ್.ಧರ್ಮರಾಜ್, ಪ್ರಮುಖರಾದ ಟಿ.ಡಿ.ರವಿಕುಮಾರ್, ಟಿ.ಜೆ.ಮಧು, ಟಿ.ಎಸ್.ಶ್ರೀಧರ್, ಎಸ್.ರವಿ, ಗೋವಿಂದಪ್ಪ, ಕುಮಾರಸ್ವಾಮಿ, ಮಲ್ಲಿಕಣ್ಣ, ರೇಣುಕಪ್ಪ, ಟಿ.ಎನ್.ಶಿವಣ್ಣ ಮತ್ತಿತರರಿದ್ದರು.