ಬೀರೂರಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನಗಳಿಸಿದ ಮಾರ್ಗದ ಕ್ಯಾಂಪ್ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಮಾಜಿ ಶಾಸಕ ವೈಎಸ್‌ವಿ ದತ್ತ ಪ್ರಶಸ್ತಿ ಪ್ರದಾನ ಮಾಡಿದರು.  
ಚಿಕ್ಕಮಗಳೂರು

ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ

ಬೀರೂರು: ವಿದ್ಯಾರ್ಥಿಗಳು ಸೋಲು ಗೆಲುವಿನ ಅಪೇಕ್ಷೆಯಿಲ್ಲದೆ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿದರು.
ಪಟ್ಟಣದ ಕೆಎಲ್ಕೆ ಮೈದಾನದಲ್ಲಿ ಆಯೋಜಿಸಿದ್ದ ಬೀರೂರು ಪಟ್ಟಣ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಬೇಕು. ಕ್ರೀಡೆಯು ಶಿಸ್ತು, ಸಮಯ ಪಾಲನೆ, ತಂಡ ಭಾವನೆ ಹಾಗೂ ಆತ್ಮವಿಶ್ವಾಸ ಬೆಳೆಸಲು ಸಹಕಾರಿಯಾಗಿದೆ ಎಂದರು.
ಇಂದು ಮಕ್ಕಳು ಮೊಬೈಲ್ ಹಾಗೂ ಟಿವಿ ವ್ಯಾಮೋಹಕ್ಕೆ ಸಿಲುಕಿ ತಮ್ಮ ಉಜ್ವಲ ಭವಿಷ್ಯ ಹಾಳುಮಾಡುತ್ತಿದ್ದಾರೆ. ಆದ್ದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಿ ಬೆಳೆಯಬೇಕಾದರೆ ಪಠ್ಯದ ಜತೆಯಲ್ಲಿ ಕ್ರೀಡಾಕೂಟಗಳು ಸಹಕಾರಿ. ಬಾಲ್ಯದಲ್ಲಿಯೇ ಕ್ರೀಡೆಗಳಲ್ಲಿ ತೊಡಗುವುದರಿಂದ ಮಕ್ಕಳಲ್ಲಿ ದೃಢ ಮನೋಭಾವ ವೃದ್ಧಿಯಾಗುತ್ತದೆ ಎಂದರು.
ಉಪ್ಪಾರಕ್ಯಾಂಪ್ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ನಾಗರತ್ನಮ್ಮ ಮಾತನಾಡಿ, ವಿದ್ಯಾರ್ಥಿಗಳು ಪ್ರಾಥಮಿಕ ಅವಸ್ಥೆಯಲ್ಲಿ ಮುಂದಿನ ಗುರಿ ಬಗ್ಗೆ ಅರಿಯಬಹುದು. ಇಂದಿನ ಕಾಲಮಾನದಲ್ಲಿ ಮಕ್ಕಳು ಆಟಗಳನ್ನು ಮರೆಯುವ ಹಂತ ತಲುಪಿದ್ದಾರೆ. ಆಟ ಆಡುವುದು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ
ಕ್ರೀಡಾಕೂಟದಲ್ಲಿ ಓಟದ ಸ್ಪರ್ಧೆ, ಕಬ್ಬಡ್ಡಿ, ವಾಲಿಬಾಲ್, ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಪುರಸಭೆ ಮಾಜಿ ಸದಸ್ಯ ಬಿ.ಆರ್.ಮೋಹನ್ ಕುಮಾರ್, ಮುಖಂಡ ಗಣೇಶ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶೇಖರಪ್ಪ, ಶಿಕ್ಷಕರಾದ ವೀರ ಮಾರುತಿ, ತಿಪ್ಪೇಶ್ ಮತ್ತು ವಿವಿಧ ಶಾಲೆಯ ದೈಹಿಕಶಿಕ್ಷಕರು ಇದ್ದರು.