ಮೂಡಿಗೆರೆ ತಾಲೂಕು ಕುಂದೂರು ಗ್ರಾಮದಲ್ಲಿ ನಡೆದ ಅಂತರ ಜಿಲ್ಲಾ ಮಟ್ಟದ ಬಾಲ್ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಗೆಲುವು ಪಡೆದ ತಂಡ ಬಹುಮಾನ ಪ್ರದರ್ಶಿಸಿತು. ಕೆ.ಕೆ.ಸುನಿಲ್, ಕೆ.ಜೆ.ಪ್ರಸನ್ನ, ನೈಜಿಲ್ ಸಾಲ್ದಾನ, ಕೆ.ಎಸ್.ರಾಜಶೇಖರ್ ಇತರರಿದ್ದರು. 
ಚಿಕ್ಕಮಗಳೂರು

ಕ್ರೀಡಾಕೂಟದಿಂದ ಮಾನಸಿಕ ಆರೋಗ್ಯ ಉತ್ತಮ

ಮೂಡಿಗೆರೆ: ಕ್ರೀಡಾಕೂಟಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮಗೊಳಿಸುವ ಶಕ್ತಿ ಎಂದು ಬಾಲ್ಬ್ಯಾಡ್ಮಿಂಟನ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಡಿ.ಕೆ.ಲಕ್ಷ್ಮಣ ಗೌಡ ಹೇಳಿದರು.
ಕುಂದೂರು ಸರ್ಕಾರಿ ಶಾಲೆ ಆವರಣದಲ್ಲಿ ಶ್ರೀ ರಾಮೇಶ್ವರ ಸ್ಪೋರ್ಟ್ಸ್ ಕ್ಲಬ್ ಏರ್ಪಡಿಸಿದ್ದ ಅಂತರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಬಾಲ್ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಕಬಡ್ಡಿ, ಲಗೋರಿ, ಚಿನ್ನಿದಾಂಡು, ಮರಕೋತಿ, ಹಿಡಿಯಾಟ, ಕಣ್ಣಾಮುಚ್ಚಾಲೆಯಂತಹ ಅಪ್ಪಟ ಗ್ರಾಮೀಣ ಕ್ರೀಡೆಗಳಲ್ಲಿ ಮಕ್ಕಳು ಭಾಗವಹಿಸುತ್ತಿದ್ದರು. ಈಗ ಅಂತಹ ಆಟಗಳೆಲ್ಲವೂ ಕಣ್ಮರೆಯಾಗಿವೆ. ಆಧುನಿಕ ಕಾಲಕ್ಕೆ ತಕ್ಕಂತೆ ಪ್ರತಿಯೊಬ್ಬರೂ ಮೊಬೈಲ್, ಕಂಪ್ಯೂಟರ್ ಮೊರೆ ಹೋಗಿದ್ದಾರೆ ಎಂದರು.
ಮಕ್ಕಳು ಮುಂದಿನ ಜೀವನವನ್ನು ಕಳೆದುಕೊಳ್ಳುವ ಮಟ್ಟಕ್ಕೆ ಮೊಬೈಲ್ಗೆ ಆಕರ್ಷಿತರಾಗಿದ್ದಾರೆ. ಗ್ರಾಮೀಣ ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡಾಕೂಟಗಳಲ್ಲಿ ಮಕ್ಕಳು ಭಾಗವಹಿಸಬೇಕು ಎಂದು ತಿಳಿಸಿದರು. 
ಗ್ರಾಮದ ಕೆ.ಆರ್.ಸುಂದರೇಶ್ ಮಾತನಾಡಿ, ಪ್ರತಿವರ್ಷ ಬಾಲ್ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಗ್ರಾಮದಲ್ಲಿ ನಡೆಸುತ್ತ ಬಂದಿದ್ದೇವೆ. ಇದಕ್ಕೆ ಗ್ರಾಮಸ್ಥರು ಹಾಗೂ ದಾನಿಗಳು ಸಹಕಾರ ನೀಡುತ್ತಿರುವುದರಿಂದ ಕ್ರೀಡಾಕೂಟ ಯಶಸ್ವಿಯಾಗಿ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟ ನಡೆಯುವುದರಿಂದ ಗ್ರಾಮದ ಜನರಿಗೆ ಮನರಂಜನೆ ಸಿಗುತ್ತದೆೆ ಎಂದು ತಿಳಿಸಿದರು. 
ಕ್ರೀಡಾಕೂಟದಲ್ಲಿ ವಿವಿಧ ಜಿಲ್ಲೆಗಳಿಂದ 14 ತಂಡ, ಚಿಕ್ಕಮಗಳೂರು ಜಿಲ್ಲೆಯ 10 ತಂಡಗಳು ಭಾಗವಹಿಸಿದ್ದವು. ಅಂತರ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಭದ್ರಾವತಿ ತಂಡ ಪ್ರಥಮ, ಮೈಸೂರಿನ ಕೆ.ಆರ್.ಎಸ್ ತಂಡ ದ್ವಿತೀಯ ಸ್ಥಾನ ಪಡೆದವು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮೈಲಿಮನೆ ತಂಡ ಪ್ರಥಮ, ಕುಂದೂರು ತಂಡ ದ್ವಿತೀಯ ಸ್ಥಾನ ಪಡೆದವು. 
ಶ್ರೀ ರಾಮೇಶ್ವರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕೆ.ಕೆ.ಸುನಿಲ್, ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಕೆ.ಜೆ.ಪ್ರಸನ್ನ, ಮುಖಂಡರಾದ ಕೆ.ಬಿ.ಮಂಜುನಾಥ್, ಕೆ.ಎಂ.ಚಂದ್ರೇಗೌಡ, ಕೆ.ಬಿ.ಲಕ್ಷ್ಮಣ ಗೌಡ, ಕೆ.ಎಸ್.ನಾರಾಯಣ ಗೌಡ, ನೈಜಿಲ್ ಸಾಲ್ದಾನ, ಕೆ.ಎಸ್.ರಾಜಶೇಖರ್ ಇತರರಿದ್ದರು.