ಮೂಡಿಗೆರೆ ತಾಲೂಕಿನ ಹಾಲೂರು ಗ್ರಾಮದಲ್ಲಿ ನಿರ್ಮಿಸಿರುವ ಮಹಾತ್ಮ ಗಾಂಧಿ ಸ್ಮಾರಕ ಗಾಂಧಿಘರ್ ಕಟ್ಟಡ.
- ಹಬ್ಬಕ್ಕೆ ಭತ್ತದ ಬದಲು ಹಣ
- ತಂಗುದಾಣ
ಕಿರುಗುಂದ ಅಬ್ಬಾಸ್ ಮೂಡಿಗೆರೆ: ತಾಲೂಕಿಗೆ ಸ್ವಾತಂತ್ರೊೃೀತ್ಸವ ಅವಿಸ್ಮರಣೀಯ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ 800ಕ್ಕೂ ಹೆಚ್ಚು ಜನ ಪಾಲ್ಗೊಂಡು ಜೈಲುವಾಸವನ್ನೂ ಅನುಭವಿಸಿದ್ದರು. ಹೋರಾಟಕ್ಕೆ ಸ್ಫೂರ್ತಿ ನೀಡಿದ್ದು ಮಹಾತ್ಮ ಗಾಂಧಿ. ಸ್ವಾತಂತ್ರೃ ಪಡೆದ ನಂತರ ಗ್ರಾಮಗಳ ಜನರಿಗೆ ನೆರವಾಗಲು ಸಂಸ್ಥೆ ಸ್ಥಾಪಿಸಿದರು. ಸಂಸ್ಥೆಯಿಂದ ಈಗಲೂ ಗ್ರಾಮಸ್ಥರಿಗೆ, ಸಮಾಜಕ್ಕೆ ನೆರವು ನೀಡಲಾಗುತ್ತಿದೆ.
ಹೌದು. ಸ್ವಾತಂತ್ರ್ಯ ಹೋರಾಟಗಾರರಾದ ಹಾಲೂರಿನ ಕೆ.ಗಿಡ್ಡಪ್ಪ, ಮುದ್ರೆಮನೆಯ ಬಿ.ಕೃಷ್ಣೇಗೌಡ ಹಾಗೂ ಹೋರಾಟಗಾರರ ಆಹ್ವಾನದ ಮೇರೆಗೆ ಗಾಂಧಿಘರ್ ಮತ್ತು ಭಾರತಿಬೈಲ್ ಗ್ರಾಮಗಳಿಗೆ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದರು. ಎರಡು ಸ್ಥಳಗಳಲ್ಲಿ ಶಿಬಿರ ನಡೆಸಿ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಹುರಿದುಂಬಿಸಿದ್ದರಿಂದ ತಾಲೂಕಿನ ಜನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು.
ವೆಂಕಟರಾಮಯ್ಯ, ಎಂ.ಕೆ.ದೊಡ್ಡಪ್ಪ ಗೌಡ, ಬಿ.ಎಸ್.ರಾಮೇಗೌಡ, ಮಾಕನಹಳ್ಳಿ ಹುಚ್ಚೇಗೌಡ, ಡಿ.ಎಸ್.ಕೃಷ್ಣಪ್ಪ ಗೌಡ, ಸಿ.ಎಂ.ಎಸ್.ಶಾಸ್ತ್ರಿ, ಶಿವಾನಂದ, ಡಾ. ಟಿ.ಆರ್.ಗೊರೂರ್, ಸಿ.ಆರ್.ಶಂಕರಪ್ಪ, ಬಿ.ಇ.ಕಣ್ಣಪ್ಪ ಗೌಡ, ಎಸ್.ಅಣ್ಣಪ್ಪ ಶೆಟ್ಟಿ, ಬಿ.ಮಂಜಯ್ಯ, ಎಚ್.ಎಂ.ಎಸ್.ಬೈರಪ್ಪ, ಅಮೀರ್ ಜಾನ್, ಗೌಡಳ್ಳಿ ಪದ್ಮೇಗೌಡ ಸೇರಿದಂತೆ 200ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ಗಾಂಧಿಘರ್ ಮತ್ತು ಭಾರತಿಬೈಲ್ ಗ್ರಾಮಗಳಲ್ಲಿ ನಡೆದ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಮಹಾತ್ಮ ಗಾಂಧೀಜಿ ಅವರ ಹೋರಾಟಕ್ಕೆ ಮೂಡಿಗೆರೆ ತಾಲೂಕಿನಿಂದ ಹೆಚ್ಚಿನ ಬಲವನ್ನು ಹೋರಾಟಗಾರರು ತಂದುಕೊಟ್ಟಿದ್ದಾರೆ ಎನ್ನುವುದಕ್ಕೆ ಗಾಂಧಿಘರ್ ಸಾಕ್ಷಿಯಾಗಿದೆ. ಅದರಲ್ಲಿ ಹಾಲೂರು ಗ್ರಾಮದ ಗಿಡ್ಡಪ್ಪ ಅವರದು ಮುಂಚೂಣಿಯ ಪಾತ್ರ. ಅಂದಿನ ಯುವಪಡೆಗೆ ಗಾಂಧೀಜಿ ಅವರ ದರ್ಶನವಾಗಿದ್ದೆ ತಡ ಎಲ್ಲರೂ ಒಗ್ಗೂಡಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಹಿರಿಯರ ಪೈಕಿ ಕೆಲವರು ಮಾತ್ರ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದರು. ಬಿಳಗುಳ ಗ್ರಾಮದ ಅಮೀರ್ ಜಾನ್ ಇತರರು ಸರ್ಕಾರದ ಪಿಂಚಣಿಯನ್ನು ನಿರಾಕರಿಸಿದ್ದರು. ಸ್ವಾತಂತ್ರ್ಯ ಪಡೆದ ನಂತರ ಹೋರಾಟಗಾರರು ಗ್ರಾಮಗಳ ಅನುಕೂಲಕ್ಕಾಗಿ ಬಾಪು ಧಾನ್ಯಕೋಟಿ ಎಂಬ ಸಂಸ್ಥೆ ಸ್ಥಾಪಿಸಿ ನೆರವಾದರು. ಸ್ವಾತಂತ್ರೃ ಹೋರಾಟಗಾರರ ಪೈಕಿ ಯಾರೊಬ್ಬರೂ ಈಗ ಇಲ್ಲ. ಆದರೆ ಅವರ ಜನಸೇವೆ ಕಾರ್ಯ ಮುಂದುವರಿದಿದೆ.
ಮಹಾತ್ಮ ಗಾಂಧೀಜಿ ಭಾಗವಹಿಸಿದ್ದ ಶಿಬಿರದ ಸ್ಥಳಕ್ಕೆ ಗಾಂಧಿಘರ್ ಎಂದು ನಾಮಕರಣ ಮಾಡಲಾಗಿದೆ. ಅದೇ ಸ್ಥಳದಲ್ಲಿ 1957ರಲ್ಲಿ ಕೇಂದ್ರ ಸರ್ಕಾರದ ಗಾಂಧಿ ಸ್ಮಾರಕ ನಿಧಿಯಿಂದ 25 ಸಾವಿರ ರೂಪಾಯಿ ವೆಚ್ಚದಲ್ಲಿ ಗಾಂಧಿ ಸ್ಮಾರಕ ಭವನ ನಿರ್ಮಿಸಲಾಗಿದೆ. ಭವನದಲ್ಲಿ ಹಾಲೂರು, ಜೋಗಣ್ಣಕೆರೆ, ಅಬಚೂರು, ಸಚಿನ್‌ನಗರ, ಚಕ್ರಮಣಿ ಗ್ರಾಮಗಳ ಜನರು ಎಚ್.ಕೆ.ಗಿಡ್ಡಪ್ಪ ನೇತೃತ್ವದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ಬಾಪು ಧಾನ್ಯಕೋಟಿ ಎಂಬ ಸಂಸ್ಥೆ ಸ್ಥಾಪಿಸಿಕೊಂಡಿದ್ದಾರೆ. 400 ಜನ ಈ ಸಂಸ್ಥೆಯಲ್ಲಿ ಷೇರುದಾರರಿದ್ದಾರೆ. ಷೇರು ಹೊಂದಿರುವ ಗ್ರಾಮಸ್ಥರಿಗೆ ಮದುವೆ ಇತರ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡಲು ಅಡುಗೆ ಪರಿಕರ, ಕುರ್ಚಿ, ಟೇಬಲ್ ಇತರ ವಸ್ತುಗಳನ್ನು ಖರೀದಿಸಿಕೊಂಡಿದ್ದಾರೆ. ಬ್ಯಾಂಕಿನಲ್ಲಿ ನಗದು ಠೇವಣಿ ಕೂಡ ಇರಿಸಿಕೊಂಡಿದ್ದಾರೆ. ಒಟ್ಟಾರೆ 50 ಲಕ್ಷ ರೂ. ವ್ಯವಹಾರ ನಡೆಯುತ್ತಿದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಗೆ ಬಾಪುಧಾನ್ಯಕೋಟಿಯಿಂದ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಹಿಂದೆ ರೈತರು ಹೆಚ್ಚು ಭತ್ತ ಬೆಳೆಯುತ್ತಿದ್ದಾಗ, ಷೇರುದಾರ ಗ್ರಾಮಗಳ ಜನರಿಗೆ ಗೌರಿಗಣೇಶ ಹಬ್ಬಕ್ಕೆ ಒಂದು ಕ್ವಿಂಟಾಲ್ ಭತ್ತ ನೀಡುತ್ತಿದ್ದರು. ಮುಂದಿನ ವರ್ಷದ ಫೆಬ್ರವರಿಯಲ್ಲಿ 110 ಕೆಜಿ ಭತ್ತವನ್ನು ಗ್ರಾಮಸ್ಥರು ಬಾಪು ಧಾನ್ಯಕೋಟಿ ಸಂಸ್ಥೆಗೆ ವಾಪಸ್ ನೀಡುತ್ತಿದ್ದರು. ಈಗ ಭತ್ತ ಬೆಳೆಯುವರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಗೌರಿಗಣೇಶ ಹಬ್ಬಕ್ಕಾಗಿ ಪ್ರತಿ ಮನೆಗೆ 1 ಸಾವಿರ ರೂ. ನೀಡಲಾಗುತ್ತದೆ. ಅದನ್ನು ಫೆಬ್ರವರಿಯಲ್ಲಿ ಗ್ರಾಮಸ್ಥರು ಹಿಂದಿರುಗಿಸಬೇಕು. ಈ ಪದ್ಧತಿ ಗಾಂಧಿಘರ್ ಗ್ರಾಮದಲ್ಲಿ ಮುಂದುವರಿದುಕೊಂಡು ಹೋಗುತ್ತಿದೆ.
ಗಾಂಧೀಜಿ ಅವರು ಗಾಂಧಿಘರ್ ಗ್ರಾಮಕ್ಕೆ ಭೇಟಿ ನೀಡಿದಾಗ ಚರಕವೊಂದನ್ನು ತಂದಿರಿಸಲಾಗಿತ್ತು. ಚರಕ ಮುರಿದುಹೋಗಿದೆ. ಗಾಂಧಿಘರ್ ಭವನದಿಂದ ಒಂದೂವರೆ ಕಿ.ಮೀ ದೂರದ ಮೂಡಿಗೆರೆ-ಬೇಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿದೆ. ಆ ಸ್ಥಳಕ್ಕೆ ಗಾಂಧಿಘರ್ ಎಂದು ನಾಮಕರಣ ಮಾಡಲಾಗಿದೆ.