ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಮೂಡಿಗೆರೆ: ತಾಲೂಕಿನ ಬೈರಾಪುರ ಗ್ರಾಮದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಮೂಲಕ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವಿತ ರಸ್ತೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮತ್ತು ಪಿಎಂ ಜನಮನ್ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಅದರಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಎಲ್.ಜೆಕಬ್ ಅವರು ರಸ್ತೆ ನಿರ್ಮಾಣದ ಬಗ್ಗೆ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದರಿಂದ ಚಿಕ್ಕಮಗಳೂರಿನ ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತರುಣ್ ಶಶಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಹರೀಶ್, ಸಂತೋಷ್, ಮಂಗಳೂರು ಉಪವಿಭಾಗದ ಎಇಇ ರಾಜೇಂದ್ರ ಪ್ರಸಾದ್ ಹಾಗೂ ರಾಜ್ಯ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಬೈರಾಪುರ-ಶಿಶಿಲ ಪ್ರಸ್ತಾವಿತ ರಸ್ತೆ ನಿರ್ಮಿಸುವ ಜಾಗ ಪರಿಶೀಲಿಸಿದ ಬಳಿಕ ಊರುಬಗೆ ಗ್ರಾಪಂ ಕಚೇರಿಯಲ್ಲಿ ಸ್ಥಳೀಯರೊಂದಿಗೆ ರಸ್ತೆ ನಿರ್ಮಾಣದ ಬಗ್ಗೆ ಚರ್ಚೆ ನಡೆಸಿದರು.
ಬೈರಾಪುರ ಗ್ರಾಮದಿಂದ ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲ ಗ್ರಾಮದವರೆಗೆ ಹಿಂದೆ ಕಚ್ಚಾ ರಸ್ತೆ ಸಂಪರ್ಕವಿದ್ದು ಘಟ್ಟದ ಮೇಲಿನ ಹಾಗೂ ಕರಾವಳಿ ಭಾಗದ ಜನ ಈ ಮಾರ್ಗ ಬಳಸುತ್ತಿದ್ದರು. ಈಗ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸಂಚಾರಕ್ಕೆ ಯೋಗ್ಯವಾಗಿಲ್ಲ. ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ ಪಕ್ಕಾ ರಸ್ತೆ ನಿರ್ಮಿಸಿದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ತಿಳಿಸಿದರು. ಈ ಭಾಗದಲ್ಲಿ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಸ್ತೆ ನಿರ್ಮಾಣವಾದರೆ ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆ, ಶಾಲೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ತೆರಳುವರಿಗೂ ಅನುಕೂಲವಾಗುತ್ತದೆ ಎಂದರು.
ನಿವೃತ್ತ ಇಂಜಿನಿಯರ್ ಎಚ್.ಎಂ.ಶಿವಪ್ರಕಾಶ್, ಗೃಹ ಮಂಡಳಿ ಮಾಜಿ ಅಧ್ಯಕ್ಷ ಜಿ.ಎಚ್.ಹಾಲಪ್ಪಗೌಡ, ರೈತ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿ.ಕೆ.ಲಕ್ಷ್ಮಣ್ ಕುಮಾರ್, ಮುಖಂಡರಾದ ಸುಮಿತ್ರೇಗೌಡ, ಮೊಹಿದಿನ್ ಸೇಟ್, ಸುಂದರ್, ಪದ್ಮನಾಭ ಇತರರಿದ್ದರು.