ಹರಿಹರಪುರದಲ್ಲಿ ಎಸ್.ಜಾನಕಿ ಗಾನರಾಧನೆ ಕಾರ್ಯಕ್ರಮ ನಡೆಯಿತು.  
ಚಿಕ್ಕಮಗಳೂರು

ಗಾಯಕಿ ಎಸ್.ಜಾನಕಿ ಹಾಡುಗಳು ಅಜರಾಮರ

ಕೊಪ್ಪ: ಎಸ್.ಜಾನಕಿ ಅವರು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ ಅವರ ಹಾಡುಗಳ ಮೂಲಕ ನಮ್ಮೊಡನೆ ಶಾಶ್ವತವಾಗಿ ನೆಲಸಿದ್ದಾರೆ. ಅವರು ಬಿಟ್ಟುಹೋಗಿರುವ ಹಾಡುಗಳ ಸಂಪತ್ತು ಅಜರಾಮರ ಎಂದು ಕೊಪ್ಪ ರೋಟರಿ ಕ್ಲಬ್‌ನ ಅಧ್ಯಕ್ಷೆ ಶೈಲಜಾ ವಿಜಯ ಕುಮಾರ್ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಭಾವಯಾನ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ನುಗ್ಗಿಮಕ್ಕಿ ಮಲ್ಲೇಶಯ್ಯನವರ ಛತ್ರದಲ್ಲಿ ಹರಿಹರಪುರದಲ್ಲಿ ಗಾನಕೋಗಿಲೆಗೆ ಎಸ್.ಜಾನಕಿ ಗಾನರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹರಿಹರಪುರದ ಜನನಿ ವಿಪ್ರ ಮಹಿಳಾ ಘಟಕದ ಸದಸ್ಯೆ ಡಾ.ಶುಭಶಾಸ್ತ್ರಿ ಮಾತನಾಡಿ,17ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಜಾನಕಿಯವರ ಪ್ರತಿಭೆ, ಸಾಧನೆ ನಮ್ಮ ಊಹೆಗೂ ನಿಲುಕದ್ದಾಗಿದೆ. ಎಲ್ಲ ರೀತಿಯ ಹಾಡುಗಳ ಭಾವಗಳಿಗೆ ಜೀವ ತುಂಬಿದ ಜಾನಕಿ ಅವರ ಕಂಠಮಾಧುರ್ಯ ನಮ್ಮ ಕಿವಿಗಳಲ್ಲಿ ಸದಾ ಅನುರಣಿಸುತ್ತ ಅವರ ನೆನಪು ಶಾಶ್ವತವಾಗಿರುತ್ತದೆ ಎಂದು ತಿಳಿಸಿದರು.
ಭಾವಯಾನ ಸಾಂಸ್ಕೃತಿಕ ಪ್ರತಿಷ್ಠಾನದ ಸದಸ್ಯ ನಟರಾಜ್ ಗೋಗಟೆ,ನಾಗರತ್ನ ನಟರಾಜ್, ಗಾಯಕಿ ರಂಜಿತಾ, ಆಶಿತಾ, ಪ್ರಣತಿ, ಅಭಿಜ್ಞಾ ಎಸ್. ಜಾನಕಿಯವರ ಹಲವಾರು ಗೀತೆಗಳಿಗೆ ಧ್ವನಿಯಾಗಿ ಗಾನಾರಾಧನೆ ನಡೆಸಿಕೊಟ್ಟರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಎಂ.ಶ್ರೀಹರ್ಷ, ಟಿ.ಕೆ. ಮಂಜುನಾಥ್ ಹೇಳಿದರು.