ಶೃಂಗೇರಿ: ನವರಾತ್ರಿ ಪ್ರಯುಕ್ತ ಶ್ರೀ ಶಾರದಾ ಪರಮೇಶ್ವರಿ ರಾಜರಾಜೇಶ್ವರಿ ಅಲಂಕಾರದಲ್ಲಿ ಕಂಗೊಳಿಸಿದಳು. ಕೈಯಲ್ಲಿ ಪಾಶ, ಅಂಕುಶ, ಪುಷ್ಪಾ ಬಾಣ ಮತ್ತು ಚಾಪಗಳನ್ನು ಧರಿಸಿ ಕರುಣಾಪೂರಕ ದೃಷ್ಟಿಯುಳ್ಳವಳಾಗಿ ಸರ್ವಾಲಂಕಾರ ಭೂಷಿತಳಾಗಿ ಕಾಮೇಶ್ವರನ ಪ್ರಾಣಕಾಂತೆಯಾಗಿ ಭಕ್ತರಿಗೆ ಸಕಲ ಸೌಖ್ಯ ಅನುಗ್ರಹಿಸುವ ಮಾತೆಯಾದಳು.
ಶ್ರೀ ಮಠದಲ್ಲಿ ವೇದಗಳ ಪಾರಾಯಣ, ವಾಲ್ಮೀಕಿ ರಾಮಾಯಣ,ದೇವಿ ಭಾಗವತ, ಶ್ರೀ ಮದ್ಭಾಗವತ, ಮಾಧವೀಯ ಶಂಕರ ದಿಗ್ವಿಜಯ, ಲಲಿತೋಪಾಖ್ಯಾನ, ಪ್ರಸ್ಥಾನತ್ರಯ ಭಾಷ್ಯ ಪಾರಾಯಣ, ಮಹಾವಿದ್ಯೆ,ದುರ್ಗಾಸಪ್ತಶತಿ ಪಾರಾಯಣಗಳು ಮುಂತಾದ ಧಾರ್ಮಿಕ ಪ್ರಕ್ರಿಯೆಗಳು ನೆರವೇರಿತು. ಉಭಯ ಶ್ರೀಗಳು ಶ್ರೀಮಠದ ಎಲ್ಲ ದೇವಾಲಯಗಳನ್ನು ದರ್ಶಿಸಿ ಮಧ್ಯಾಹ್ನ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ಶಾರದಾಂಬ ಡೋಲೋತ್ಸವ ಹಾಗೂ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿದ ಬಳಿಕ ಜಗದ್ಗುರು ಶ್ರೀ ವಿಧುಶೇಖರಭಾರತೀ ಅವರು ಶ್ರೀ ಮಠದ ಸಂಪ್ರದಾಯಾನುಸಾರವಾಗಿ ಕಿರೀಟ, ಆಭರಣಗಳನ್ನ ಧರಿಸಿ ಚಂದ್ರಮೌಳೀಶ್ವರ ತೊಟ್ಟಿಯಿಂದ ಶ್ರೀ ಶಾರದಮ್ಮನವರ ದೇವಾಲಯದಲ್ಲಿ ಭಾಗಿಯಾದರು. ಶ್ರೀಗಳು ದೇವಾಲಯವನ್ನು ಪ್ರವೇಶಿಸಿದ ನಂತರ ವ್ಯಾಖ್ಯಾನ ಸಿಂಹಾಸನದಲ್ಲಿರುವ ಶ್ರೀ ಶಾರದಾಂಬೆ ಉತ್ಸವಮೂರ್ತಿಯನ್ನು ಬಂಗಾರದ ರಥದಲ್ಲಿ ಇರಿಸಲಾಯಿತು. ವೇದ ಹಾಗೂ ವಾದಯ ಘೋಷ, ಛತ್ರಚಾಮರಗಳೊಂದಿಗೆ ಶ್ರೀ ದೇವಾಲಯದ ಒಳಪ್ರಕಾರದಲ್ಲಿ ಮೂರು ಸುತ್ತು ರಥೋತ್ಸವವು ನಡೆಯಿತು. ನಂತರ ಸಿಂಹಾಸನದಲ್ಲಿ ಜಗದ್ಗುರುಗಳು ಆಸೀನರಾದದರು. ಸಪ್ತಶತಿ ಪಾರಾಯಣವನ್ನು ಋತ್ವಿಜರು ಪಠಿಸಿದ ಬಳಿಕ ಅಮ್ಮನವರಿಗೆ ಮಹಾ ಮಂಗಳಾರತಿ, ವೇದಗಳ ಪಾರಾಯಣ,ಪಂಚಾಂಗಶ್ರವಣ, ಸಂಗೀತ ಹಾಗೂ ಸರ್ವ ವಾದ್ಯಸೇವೆ ನೆರವೇರಿತು. ದರ್ಬಾರು ವೀಕ್ಷಿಸಲು ಸಹಸ್ರ ಸಂಖ್ಯೆಯಲ್ಲಿ ಭಕ್ತರು ಉತ್ಸಾಹದಿಂದ ಕಾಯುತ್ತಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀ ಸುಂದರಮ್ ಭಾಗವತರ್ ಮುಂಬೈ ಇವರಿಂದ ನಾಮಸಂಕೀರ್ತನೆ ಜರುಗಿತು.
ಬೀದಿ ಉತ್ಸವದಲ್ಲಿ ಮರ್ಕಲ್ ಗ್ರಾಪಂ ವ್ಯಾಪ್ತಿಯ ಭಕ್ತರು ಭಾಗಿಯಾದರು.ಶ್ರೀಶಾಂತಾಸಮೇತ ಋಷ್ಯ ಶೃಂಗಸ್ವಾಮಿ ದೇವಸ್ಥಾನ ಧರ್ಮದರ್ಶಿ ಮಂಡಳಿ ಹಾಗೂ ದೀಪೋತ್ಸವ ಸಮಿತಿ, ಕಿಗ್ಗಾ, ಶ್ರೀ ಕೊಚ್ಚಾರು ಲಕ್ಷ್ಮೀನರಸಿಂಹ ದೇವಸ್ಥಾನ ಸಮಿತಿ, ಬಜರಂಗದಳ-ಕಿಗ್ಗಾ ಪ್ರಖಂಡ, ಶ್ರೀಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನ ಜೀಣೋದ್ಧಾರ ಸಮಿತಿ, ಶ್ರೀ ಮಹಾಗಣಪತಿ ಸೇವಾ ಸಮಿತಿ ವಿವಿಧ ದೇವಸ್ಥಾನಗಳು, ಶಾಲೆಗಳು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಶ್ರೀ ಶಾರದಾಪೀಠದ ಹೊರ ಪ್ರಾಂಗಣದಲ್ಲಿರುವ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ವಿಜಯನಗರ ಸಾಮ್ರಾಜ್ಯದ ಇತಿಹಾಸ ಹಾಗೂ ವೈಭವವನ್ನು ಸಾರುವ ಅಪರೂಪದ ಚಿತ್ರಪಟಗಳು ಶ್ರೀಮಠಕ್ಕೆ ಆಗಮಿಸಿದ ಭಕ್ತರ ಗಮನ ಸೆಳೆದವು. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಜಗದ್ಗುರು ಶ್ರೀ ವಿದ್ಯಾರಣ್ಯರು ನೀಡಿದ ಮಾರ್ಗದರ್ಶನ, ಹಕ್ಕ-ಬುಕ್ಕರಿಗೆ ಜಗದ್ಗುರುಗಳ ಮೇಲೆ ಇದ್ದ ಧನ್ಯತಾಭಾವ, ಗುರುಪರಂಪರೆ ಮಹತ್ವವನ್ನು ಸಾರುವ ಚಿತ್ರಪಟಗಳು, ಶ್ರೀಶೃಂಗೇರಿ ಪೀಠಕ್ಕೆ ಶಿಷ್ಯರು ನೀಡುವ ಗೌರವ. ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ವೀಕ್ಷಣೆ ಮಾಡಿದ ಪ್ರೇಕ್ಷಕರಿಗೆ ಶೃಂಗೇರಿ ಕ್ಷೇತ್ರದ ಮಹಿಮೆ, ಇಲ್ಲಿನ ಅವಿಚ್ಛಿನ್ನ ಗುರುಪರಂಪರೆಯ ಆಧ್ಯಾತ್ಮಿಕ ಸಾಧನೆಗಳು ಮುಂತಾದ ಇತಿಹಾಸ-ಆಧ್ಯಾತ್ಮಿಕ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತ ಪಡಿಸಿದ ಪ್ರದರ್ಶನ ಜನಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಯಿತು.
ಮಂಗಳವಾರ ಮಹಾನವಮಿ ಪ್ರಯುಕ್ತ ಶ್ರೀ ಜಗನ್ಮಾತೆ ಸಿಂಹವಾಹನಾಲಂಕಾರದಲ್ಲಿ ಭಕ್ತರನ್ನು ಅನುಗ್ರಹಿಸಲಿದ್ದಾಳೆ. ಶತಚಂಡೀಯಾಗದ ಪೂರ್ಣಾಹುತಿ, ಗಜಾಶ್ವಪೂಜೆ, ಸಂಜೆ ವಿಜಯೋತ್ಸವ, ಶಮೀಪೂಜೆ ನೆರವೇರಲಿದೆ. ಬೀದಿ ಉತ್ಸವದಲ್ಲಿ ಕೆರೆ ಗ್ರಾಪಂ ವ್ಯಾಪ್ತಿಯ ಭಕ್ತಾಧಿಗಳು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೆಲರ್ಕೋಡ್ ಸಹೋದರಿಯರಾದ ವಿದುಷಿ ರಜನಿ ಹಾಗೂ ವಿದುಷಿ ಮಧುಮಂತಿ ಅವರಿಂದ ನಾಮಸಂಕೀರ್ತನೆ ನೆರವೇರಲಿದೆ.