ಶೃಂಗೇರಿ: ನವರಾತ್ರಿ ಉತ್ಸವದ ಪ್ರಯುಕ್ತ ಶುಕ್ರವಾರ ಶ್ರೀಶಾರದೆ ವೀಣಾಶಾರದಾಲಂಕಾರದಲ್ಲಿ ಕಂಗೊಳಿಸಿದಳು. ಮಾತೆ ಶಾರದೆ ಕೈಯಲ್ಲಿ ವೀಣೆ ಧರಿಸಿ, ಜಡರಾದ ಭಕ್ತರಿಗೆ ಜ್ಞಾನ ಅನುಗ್ರಹಿಸುವ ಈ ಅಲಂಕಾರವನ್ನು ನೆರೆದ ಭಕ್ತರು ಶ್ರದ್ಧಾಭಕ್ತಿಯಿಂದ ವೀಕ್ಷಿಸಿ ಧನ್ಯತಾಭಾವ ಪಡೆದರು.
ಧಾರ್ಮಿಕ ಕಾರ್ಯಕ್ರಮಗಳ ಪ್ರಯುಕ್ತ ಸರಸ್ವತ್ಯಾವಾಹನೆ, ಶತಚಂಡೀಯಾಗದ ಪ್ರಯುಕ್ತ ಶಾಲಾಪ್ರವೇಶ, ಪುರಶ್ಚರಣಾರಂಭ ನೆರವೇರಿತು. ಶ್ರೀ ಮಠದಲ್ಲಿ ಸೂತಸಂಹಿತೆ, ಲಕ್ಷ್ಮೀನಾರಾಯಣ ಹೃದಯ, ದುರ್ಗಾಸಪ್ತಶತಿ ಪಾರಾಯಣಗಳು ನೆರವೇರಿತು.ದುರ್ಗಾಜಪ, ಭುವನೇಶ್ವರಿ ಜಪ, ಶ್ರೀ ಸೂಕ್ತ ಜಪಗಳು, ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಶತರುದ್ರಾಭೀಷೇಕ, ಜಗನ್ಮಾತೆಯ ಅವಾಸಸ್ಥಾನವೆಂದು ಶಾಸ್ತ್ರದಲ್ಲಿ ತಿಳಿಸಿರುವ ಶ್ರೀ ಚಕ್ರಕ್ಕೆ ನವಾವರಣ ಪೂಜೆ, ಸುವಾಸಿನೀ ಹಾಗೂ ಕುಮಾರೀ ಪೂಜೆ ನೆರವೇರಿತು. ಜಗದ್ಗುರುಗಳು ಶ್ರೀ ಶಾರದೆಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ನಾನಾ ಪ್ರಾಂತ್ಯಗಳಿಂದ ಆಗಮಿಸಿದ್ದ ಭಕ್ತರು ಶ್ರೀ ಶಾರದಾಂಬೆ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗಿಯಾದರು. ಸದ್ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಸರತಿ ಸಾಲಿನಲ್ಲಿ ನಿಂತು ತಾಯಿ ದರ್ಶನ ಪಡೆದರು. ಪ್ರತಿ ವರ್ಷದಂತೆ ಈ ಬಾರಿ ಕೂಡಾ ಮುಖ್ಯರಸ್ತೆಯಲ್ಲಿ ಹಾಕಲಾದ ವ್ಯಾಪಾರ ಮಳಿಗೆಗಳಲ್ಲಿ ವಿವಿಧ ಬಣ್ಣದ ಗೊಂಬೆಗಳು, ಕಾರುಗಳು, ದೊಡ್ಡದಾದ ಬಲೂನುಗಳು, ಬಳೆಗಳು, ಕಿವಿಯೋಲೆಗಳು, ಮನೆಯ ಸಾಮಾಗ್ರಿಗಳು,ಬ್ಯಾಗುಗಳು, ಹೂ ಮಾಲೆಗಳು, ಸಿಹಿ ತಿನಿಸುಗಳು ನೋಡುಗರ ಗಮನ ಸೆಳೆಯುತ್ತಿತ್ತು. ಬಿಸಿಲಿನ ವಾತಾವರಣ ಇರುವ ಕಾರಣ ವ್ಯಾಪಾರ ವಹಿವಾಟು ಜೋರಾಗಿತ್ತು.
ಬೀದಿ ಉತ್ಸವ
ಬೀದಿ ಉತ್ಸವದಲ್ಲಿ ನೆಮ್ಮಾರ್ ಗ್ರಾಪಂ ಭಕ್ತಾದಿಗಳು ಭಾಗವಹಿಸಿದ್ದರು. ಶ್ರೀ ವಿನಾಯಕ ಸೇವಾ ಸಮಿತಿ, ಅಳಲೆಗುಡ್ಡ, ಶ್ರೀರಾಮ ಸೇವಾ ಸಮಿತಿ, ಮಲ್ಲಿಕಾರ್ಜುನ ಸೇವಾ ಸಮಿತಿ, ಎಬಿವಿಪಿ, ಶ್ರೀ ರಾಮಸೇನೆ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಮುಂತಾದ ಸಂಘ-ಸಂಸ್ಥೆಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಉತ್ಸವದಲ್ಲಿ ಭಾಗಿಯಾದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೈದರಾಬಾದ್ ವಿದುಷಿ ಶ್ರೀಮತಿ ಇಮಾನಿ ಲಲಿತಕೃಷ್ಣ ಅವರಿಂದ ವೀಣಾವಾದನ ನೆರವೇರಿತು. ಶ್ರೀಶಾರದಾ ಅಮ್ಮನವರಿಗೆ ಉಯ್ಯಲೆ ಸೇವೆ ಜರುಗಿತು.
ಶ್ರೀಮಠದ ಸಂಪ್ರದಾಯಕ್ಕೆ ಅನುಗುಣವಾಗಿ ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರು ದೇವಾಲಯವನ್ನು ಪ್ರವೇಶಿಸಿದ ಬಳಿಕ ವ್ಯಾಖ್ಯಾನ ಸಿಂಹಾಸನದಲ್ಲಿ ಇರುವ ಶ್ರೀ ಶಾರದೆ ಮೂರ್ತಿಯನ್ನು ಬಂಗಾರದ ರಥದಲ್ಲಿ ಕುಳ್ಳಿರಿಸಿ ದೇವಾಲಯದ ಒಳಪ್ರಕಾರದಲ್ಲಿ ಮೂರು ಸುತ್ತು ವೇದ, ವಾದ್ಯ ಫೋಷಗಳೊಂದಿಗೆ ರಥೋತ್ಸವ ನೆರವೇರಿತು. ಶ್ರೀ ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಯತಿಗಳು ಅಸೀನರಾದ ಬಳಿಕ ವೇದಗಳ ಪಾರಾಯಣ, ಪಂಚಾಂಗಶ್ರವಣ, ಸಂಗೀತ, ಸರ್ವವಾದ್ಯ ಸೇವೆ ನಡೆಯಿತು. ದೇವಿಗೆ ಮಹಾಮಂಗಳಾರತಿ ಹಾಗೂ ಅಷ್ಟಾವಧಾನ ಸೇವೆ ನಡೆಯಿತು.
ಈ ಜಗತ್ತಿನಲ್ಲಿ ಪರಾಶಕ್ತಿ ನಾನೊಬ್ಬಳೇ..ನನ್ನನ್ನು ಬಿಟ್ಟು ಎರಡನೆಯದು ಯಾವುದೂ ಇಲ್ಲ ಎಂದು ಶ್ರೀದೇವಿ ಮಹಾತ್ಮದಲ್ಲಿ ಅಮ್ಮನವರು ತಿಳಿಸಿದಂತೆ ಈ ವಿವಿಧ ಅಲಂಕಾರಗಳು, ಅವತಾರಗಳೆಲ್ಲವೂ ಈ ಜಗನ್ನಾತೆಯದ್ದೇ ಆಗಿದೆ. ಶ್ರೀ ಶಾರದಾಪರಮೇಶ್ವರಿ ವಿದ್ಯೆಯನ್ನು ಅನುಗ್ರಹಿಸುವಾಗ ಸರಸ್ವತಿಯಾಗಿ, ಧನ-ಧಾನ್ಯಾದಿ ಸಂಪತ್ತನ್ನು ಅನುಗ್ರಹಿಸುವಾಗ ಮಹಾಲಕ್ಷ್ಮೀಯಾಗಿದುಷ್ಟಸಂಹಾರ ಕಾಲದಲ್ಲಿ ಚಾಮುಂಡಿಯಾಗಿ ಭಯ ಹೋಗಲಾಡಿಸುವಾಗ ದುರ್ಗಾಪರಮೇಶ್ವರಿಯಾಗಿ ಆವತರಿಸಿ ಭಕ್ತರನ್ನು ಅನುಗ್ರಹಿಸುತ್ತಾಳೆ. ಹೀಗೆ ಜಗದಂಬೆಯ ರೂಪಗಳು ಭಿನ್ನ ಭಿನ್ನವಾದರೂ ಸಹಚೈತನ್ಯ ಒಂದೇ ಆಗಿರುತ್ತದೆ.
ಜಗನ್ಮಾತೆ ಶನಿವಾರ ಇಂದ್ರಾಣಿ ಅಲಂಕಾರದಲ್ಲಿ ಭಕ್ತರನ್ನು ಅನುಗ್ರಹಿಸುತ್ತಾಳೆ. ಬೀದಿ ಉತ್ಸವದಲ್ಲಿ ಬೇಗಾರು ಗ್ರಾಪಂ ಭಕ್ತಾದಿಗಳು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀಕಾಂತ್ ಕೌಂಡಿನ್ಯನ್ ಭಾಗವತರ್, ಮೆಹನೂರು ಅವರಿಂದ ನಾಮಸಂಕೀರ್ತನೆ ನೆರವೇರಲಿದೆ.