ಎನ್.ಆರ್.ಪುರ ತಾಲೂಕು ಕಾನೂರು ಗ್ರಾಮದಲ್ಲಿ ಏರ್ಪಡಿಸಿದ್ದ ಶಂಕರ ಜಯಂತಿಯಲ್ಲಿ ವಾಗ್ಮಿ ಗಿರೀಶ್ ಉಳುವೆ ಮಾತನಾಡಿದರು. ಕೆ.ಆರ್.ಕುಮಾರಸ್ವಾಮಿ ಇದ್ದರು.
ಎನ್.ಆರ್.ಪುರ: ಶಂಕರರ ಸಿದ್ಧಾಂತ ಅರಿತು ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ವಾಗ್ಮಿ ಗಿರೀಶ್ ಉಳುವೆ ತಿಳಿಸಿದರು.
ಕಾನೂರು ಕುಮಾರಸ್ವಾಮಿ ಅವರ ಮನೆಯಂಗಳದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಎನ್.ಆರ್.ಪುರ ಘಟಕ ಹಾಗೂ ಯುವ ಹೆಬ್ಬಾರ ಬಳಗ, ಕಾನೂರು ಶ್ರೀರಾಮ ಸೇವಾ ಭಜನಾ ಮಂಡಳಿ ಆಶ್ರಯದಲ್ಲಿ ನಡೆದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಹಿಂದೂ ಧರ್ಮ ಜಗತ್ತಿನಲ್ಲೇ ಶ್ರೇಷ್ಠ ಹಾಗೂ ಪುರಾತನ ಧರ್ಮವಾಗಿದೆ. ಹಿಂದೂ ಧರ್ಮದ ಸಂಸ್ಕೃತಿ ಎಲ್ಲ ಧರ್ಮಗಳಿಗೂ ಅನುಕರಣೀಯವಾಗಿದೆ. ಮೌಲ್ಯಯುತ ಬದುಕು ನಡೆಸುವುದನ್ನು ಭಾರತೀಯ ಸಂಸ್ಕೃತಿ ಕಲಿಸಿದೆ. ಭಗವಂತನಲ್ಲಿ ಎಲ್ಲವೂ ಇದೆ. ಭಗವಂತ ನಮ್ಮಿಂದ ನಿರೀಕ್ಷೆ ಮಾಡುವುದು ಭಕ್ತಿ ಮಾತ್ರ. ಪ್ರತಿಯೊಬ್ಬರಲ್ಲೂ ದೇವರಿದ್ದಾನೆ. ಹಾಗಾಗಿ ಯಾರ ಮನಸ್ಸಿಗೂ ನೋವಾಗದಂತೆ ಬದುಕಬೇಕು. ನಿಂದಕರನ್ನು ಸಹ ಕ್ಷಮಿಸುವಂಥ ವ್ಯಕ್ತಿತ್ವ ನಮ್ಮದಾಗಬೇಕು ಎಂದರು.
ಹೆಬ್ಬಾರ ಬ್ರಾಹ್ಮಣಸಭಾದ ಎನ್.ಆರ್.ಪುರ ತಾಲೂಕು ಘಟಕದ ಅಧ್ಯಕ್ಷ ಎ.ವಿ.ಪ್ರಶಾಂತ್ ಮಾತನಾಡಿ, ಶಂಕರಾಚಾರ್ಯರನ್ನು ಕೇವಲ ಒಂದು ದಿನದ ಮಟ್ಟಿಗೆ ಸ್ಮರಿಸದೆ ಪ್ರತಿದಿನವೂ ಆರಾಧಿಸಬೇಕು. ಶಂಕರಾಚಾರ್ಯರು ಮಾಡಿರುವ ಸಾಧನೆಯನ್ನು ನೋಡಿದರೆ ಅವರು ದೈವೀ ಸ್ವರೂಪರಾಗಿದ್ದರು. ಹಿಂದೂ ಧರ್ಮದ ಉಳಿವಿಗೆ ಶಂಕರಾಚಾರ್ಯರು ಕಾರಣರಾಗಿದ್ದಾರೆ ಎಂದರು.
ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಂಘದ ಸದಸ್ಯರು ಸಾಮೂಹಿಕ ಗುರುವಂದನೆ ಪಠಿಸಿದರು. ಕಾನೂರು ಗ್ರಾಮದ ಹೆಬ್ಬಾರ ಬ್ರಾಹ್ಮಣ ಸಮಾಜದ ಮುಖಂಡ ಕೆ.ಆರ್.ಕುಮಾರಸ್ವಾಮಿ, ಹೆಬ್ಬಾರ ಬ್ರಾಹ್ಮಣ ಸಭಾದ ಕಾರ್ಯದರ್ಶಿ ಕೆ.ವಿ.ಪ್ರಭಾಕರ, ಖಜಾಂಚಿ ಕೆ.ಆರ್.ಶಿವಕುಮಾರ್ ಇದ್ದರು.