ತರೀಕೆರೆ ಪುರಸಭೆಗೆ ನೂತನ ಉಪಾಧ್ಯಕ್ಷೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಶಮೀಮ್ ಭಾನು ಮತ್ತು ಟಿ.ಎಸ್.ಚೇತನ್ ಅವರನ್ನು ಸಹ ಸದಸ್ಯರು ಅಭಿನಂದಿಸಿದರು.
ತರೀಕೆರೆ: ಪುರಸಭೆ ನೂತನ ಉಪಾಧ್ಯಕ್ಷರಾಗಿ 6ನೇ ವಾರ್ಡ್‌ನ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶಮೀಮ್ ಭಾನು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 19ನೇ ವಾರ್ಡ್‌ನ ಕಾಂಗ್ರೆಸ್ ಬೆಂಬಲಿತ ಸದಸ್ಯ ಟಿ.ಎಸ್.ಚೇತನ್ ಅವಿರೋಧ ಆಯ್ಕೆಯಾದರು.
ಹಿಂದಿನ ಉಪಾಧ್ಯಕ್ಷೆ ಟಿ.ಆರ್.ಗೀತಾ ಮತ್ತು ಹಿಂದಿನ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಕುಮಾರಪ್ಪ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಉಪಾಧ್ಯಕ್ಷೆ ಸ್ಥಾನಕ್ಕೆ ಶಮೀಮ್ ಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಟಿ.ಎಸ್.ಚೇತನ್ ಮಾತ್ರ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಸೀಲ್ದಾರ್ ಎಚ್.ಜೆ.ರಶ್ಮಿ ಇಬ್ಬರ ಅವಿರೋಧ ಆಯ್ಕೆ ಪ್ರಕಟಿಸಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಯು.ಫಾರೂಕ್ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ, ಕಾಂಗ್ರೆಸ್ ಸಾಮಾಜಿಕ ನ್ಯಾಯದಡಿ ಪಟ್ಟಣದ ಪುರಸಭೆಯಲ್ಲಿ ಅಧಿಕಾರ ಹಂಚಿಕೆ ಮಾಡಿದೆ. ಪ್ರಸ್ತುತ ಆಡಳಿತ ಮಂಡಳಿ ಕ್ರಿಯಾಶೀಲವಾಗಿದ್ದು, ಪಟ್ಟಣದ ಪ್ರಗತಿಗೆ ಒಗ್ಗೂಡಿ ಶ್ರಮಿಸುತ್ತಿದೆ. ಸಾರ್ವಜನಿಕ ಜೀವನದಲ್ಲಿ ಯಾವುದೇ ಅಧಿಕಾರ, ಸ್ಥಾನ-ಮಾನ ಲಭಿಸಿದಾಗ ಜನಮಾನಸದಲ್ಲಿ ಉಳಿಯುವಂಥ ಕೆಲಸ ಮಾಡಿ ಹೆಜ್ಜೆ ಗುರುತು ಬಿಟ್ಟು ಹೋಗಬೇಕು ಎಂದರು.
ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಪಂಚಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶಮೀವುಲ್ಲಾ ಷರೀಫ್, ತಾಲೂಕು ಅಧ್ಯಕ್ಷೆ ಹೇಮಲತಾ, ಪುರಸಭೆ ಸದಸ್ಯರಾದ ಟಿ.ಎಂ.ಭೋಜರಾಜ್, ಟಿ.ದಾದಾಪೀರ್, ಪಾರ್ವತಮ್ಮ, ರಿಹಾನ ಪರ್ವೀನ್, ಟಿ.ಜಿ.ಶಶಾಂಕ್, ಆರ್.ಕುಮಾರಪ್ಪ, ಪರಮೇಶ್, ಟಿ.ಜಿ.ಲೋಕೇಶ್, ವಸಂತ, ಎಂ.ಗಿರಿಜಾ, ಡಿ.ಎಸ್.ದಿವ್ಯ, ಮಾಜಿ ಅಧ್ಯಕ್ಷ ಟಿ.ಎಸ್.ರಮೇಶ್, ಮುಖ್ಯಾಧಿಕಾರಿ ತಾಹೀರಾ ತಸ್ನೀಮ್ ಮತ್ತಿತರರಿದ್ದರು.