29 kls1 
ಚಿಕ್ಕಮಗಳೂರು

ಹಿರೇಬೈಲಲ್ಲಿ ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ

ಜಿ.ಹೆಚ್. ಧನ್ಯಕುಮಾರ್
ಕಳಸ: ಹಿರೇಬೈಲು ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ಮೂರು ದಿನಗಳಿಂದ ಸರ್ವರ್ ಸಮಸ್ಯೆಯಿಂದ ಬಡ ಜನರಿಗೆ ಪಡಿತರ ಸಿಗದೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಗಿದೆ.
ಸರ್ಕಾರದ ಉಚಿತ ಅಕ್ಕಿ ನಂಬಿ ಜೀವನ ನಡೆಸುವ ಕೂಲಿ ಕಾರ್ಮಿಕರು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಿರೇಬೈಲು ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳ ಜನರೆಲ್ಲರೂ ದಿನಗೂಲಿ ನಂಬಿ ಬದುಕುವವರು. ಒಂದು ದಿನ ಕೆಲಸಕ್ಕೆ ಹೋಗದಿದ್ದರೆ ಆದಿನದ ಒಲೆ ಉರಿಯುವುದು ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಕಳೆದ ಮೂರು ದಿನಗಳಿಂದ ಗ್ರಾಮಸ್ಥರು ತಮ್ಮ ದಿನದ ಕೂಲಿ ಕಳೆದು ಕೊಂಡು ನ್ಯಾಯಬೆಲೆ ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಬೆಳಗ್ಗೆ 7ಗಂಟೆಗೆ ಬಂದು ಅಂಗಡಿ ಮುಂದೆ ಕುಳಿತುಕೊಳ್ಳುತ್ತಿದ್ದೇವೆ. ಮಧ್ಯಾಹ್ನ ವಾದರೂ ಸರ್ವರ್ ಸಮಸ್ಯೆ ಎನ್ನುತ್ತಾರೆ. ಕೂಲಿಯೂ ಇಲ್ಲ, ಇತ್ತ ಪಡಿತರವೂ ಇಲ್ಲದೆ ನಮ್ಮ ಹೊಟ್ಟೆಪಾಡು ಹೇಗೆ? ಎನ್ನುತ್ತಾರೆ ಸ್ಥಳೀಯ ಗ್ರಾಮಸ್ಥರು. ಪ್ರಸಕ್ತ ತಿಂಗಳ ಪಡಿತರ ಪಡೆಯಲು ಇನ್ನೂ ಕೇವಲ ಮೂರು ದಿನ ಬಾಕಿ ಇವೆ. ತಿಂಗಳ ಕೊನೆಯೊಳಗೆ ಪಡಿತರ ಸಿಗದಿದ್ದರೆ ಈ ತಿಂಗಳ ಕೋಟಾ ಕೈತಪ್ಪಿಹೋಗುವ ಭೀತಿ ಗ್ರಾಹಕರನ್ನು ಕಾಡುತ್ತಿದೆ. ಬಯೋಮೆಟ್ರಿಕ್ ಯಂತ್ರದಲ್ಲಿ ಸರ್ವರ್ ಬ್ಯುಸಿ ಎಂದು ಬರುತ್ತಿರುವುದರಿಂದ ವೃದ್ಧರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ದಿನವಿಡೀ ಕಾದು, ಸಂಜೆ ಬರಿಕೈಯಲ್ಲಿ ಮನೆಗೆ ಮರಳುತ್ತಿದ್ದಾರೆ.
ಸರ್ಕಾರ ಮತ್ತು ಆಹಾರ ಇಲಾಖೆಯ ತಾಂತ್ರಿಕ ಲೋಪದಿಂದಾಗಿ ಗ್ರಾಹಕರು ಶಿಕ್ಷೆ ಅನುಭವಿಸುವಂತಾಗಿದೆ. ತಿಂಗಳ ಅಂತ್ಯ ಇರುವುದರಿಂದ ಇಲಾಖೆ ಉನ್ನತ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಹಿರೇಬೈಲು ಪಡಿತರ ಕೇಂದ್ರದ ಸರ್ವರ್ ಸಮಸ್ಯೆ ಬಗೆಹರಿಸಬೇಕು. ಅಥವಾ ಪರ್ಯಾಯ ವ್ಯವಸ್ಥೆ ಮೂಲಕ ಅರ್ಹ ಲಾನುಭವಿಗಳಿಗೆ ಪಡಿತರ ತಲುಪಿಸುವ ಕೆಲಸ ಮಾಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.