ಜೈಪುರ ಗ್ರಾಮದಲ್ಲಿ ಹೊಲಿಗೆ ತರಬೇತಿ ಕೇಂದ್ರವನ್ನು ಬಿ.ಸುಧಾಕರ್ ಉದ್ಘಾಟಿಸಿದರು.  
ಚಿಕ್ಕಮಗಳೂರು

ಸ್ವ ಉದ್ಯಮ ಆರಂಭದಿಂದ ಸ್ವಾವಲಂಬಿ ಜೀವನ ಸಾಧ್ಯ

ಲಿಂಗದಹಳ್ಳಿ: ಜೈಪುರ ಗ್ರಾಮದ ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಭದ್ರಾ ವನ್ಯಜೀವಿ ತಣಿಗೆಬೈಲು ವಲಯದಿಂದ ಅತ್ಯಾಧುನಿಕ ಬಟ್ಟೆ ಹೊಲಿಗೆ ಯಂತ್ರಗಳ ವಿತರಣೆ ಜತೆಗೆ ಬಸ್ ನಿಲ್ದಾಣ ಸಮೀಪ ಹೊಲಿಗೆ ತರಬೇತಿ ಕೇಂದ್ರವನ್ನು ನಿರ್ಮಿಸಲಾಗಿದೆ ಎಂದು ತಣಿಗೆಬೈಲು ಭದ್ರವನ್ಯ ಜೀವಿ ವಲಯಾರಣ್ಯಾಧಿಕಾರಿ ಬಿ.ಸುಧಾಕರ್ ತಿಳಿಸಿದರು.
ಜೈಪುರ ಗ್ರಾಮದಲ್ಲಿ ನಿರ್ಮಾಣವಾಗಿರುವ ಹೊಲಿಗೆ ತರಬೇತಿ ಕೇಂದ್ರವನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಿ ಮಾತನಾಡಿ, ಜೈಪುರ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸಿಸುತ್ತಿದ್ದು, ಅವರೆಲ್ಲರ ಅಭ್ಯುದಯಕ್ಕಾಗಿ ಸುಸಜ್ಜಿತ ಹೊಲಿಗೆ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಮಹಿಳೆಯರು ತಮ್ಮ ಹೆಸರು ನೋಂದಾಯಿಸಿಕೊಂಡು ಹೊಲಿಗೆ ತರಬೇತಿ ಪಡೆದು ಸ್ವ ಉದ್ಯಮ ನಡೆಸಬಹುದು ಎಂದು ಹೇಳಿದರು.
ಬಿ.ಸಿ.ಟ್ರಸ್ಟ್ ಯೋಜನೆಯ ಬಳ್ಳಾವರ ವಲಯದ ಮೇಲ್ವಿಚಾರಕ ವಸಂತ್ ಮಾತನಾಡಿ, ಧರ್ಮಸ್ಥಳ ಸಂಘದಿಂಧ ಅನೇಕ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಮಹಿಳೆಯರ ವಿಕಾಸಕ್ಕಾಗಿ ಸಿರಿ ಗ್ರಾಮದ್ಯೋಗದ ಮೂಲಕ ವಿವಿಧ ಉತ್ಪನ್ನಗಳನ್ನು ತಯಾರಿಸಿರುವ ಜತೆಗೆ ಮಹಿಳೆಯರ ಅಭಿವೃದ್ಧಿಗಾಗಿ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜೈಪುರ ಗ್ರಾಮದಲ್ಲಿ ಉಚಿತವಾಗಿ ಬಟ್ಟೆ ಹೊಲಿಗೆ ತರಬೇತಿ ಆರಂಭಿಸಲಾಗಿದ್ದು, ನಾಲ್ಕು ತಿಂಗಳು ತರಬೇತಿ ನೀಡಿ ಜತೆಗೆ ತಿಂಗಳಿಗೆ 3 ಸಾವಿರದಂತೆ 12 ಸಾವಿರ ಗೌರವ ಧನವನ್ನು ನೀಡಲಿದ್ದು, ಅಗತ್ಯವುಳ್ಳವರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಹುಲಿ ಪ್ರತಿಷ್ಠಾನ ಸಮಿತಿ ಸದಸ್ಯರಾದ ಟಿ.ಎಸ್.ಹೇಮ್ಲನಾಯ್ಕ , ಭದ್ರ ವನ್ಯಜೀವಿ ತಣಿಗೆಬೈಲು ವಲಯದ ಉಪ ವಲಯಾರಣ್ಯಾಧಿಕಾರಿ ಪ್ರದೀಪ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸವಿತಾ, ಬಳ್ಳಾವರ ವಲಯ ಒಕ್ಕೂಟದ ಅಧ್ಯಕ್ಷೆ ಸೌಮ್ಯ ಪುಷ್ಪಾಧರ್, ಹೊಲಿಗೆ ತರಬೇತಿ ಶಿಕ್ಷಕಿ ಲಲಿತ ಇದ್ದರು.