ಮೂಡಿಗೆರೆಯ ತ್ರಿಪುರ ಗ್ರಾಮದಲ್ಲಿ ಟೈಲರಿಂಗ್ ತರಬೇತಿ ಕಾರ್ಯಗಾರವನ್ನು ಯೋಜನಾಧಿಕಾರಿ ಬೇಬಿ ಉದ್ಘಾಟಿಸಿದರು.
ಮೂಡಿಗೆರೆ: ಮಹಿಳೆಯರು ವಿವಿಧ ರೀತಿಯ ಕೈಗಾರಿಕೆಗಳ ಬಗ್ಗೆ ತರಬೇತಿ ಪಡೆದು ಸ್ವ ಉದ್ಯೋಗ ಆರಂಭಿಸಿದರೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರತಿ ವಿಭಾಗದಲ್ಲಿ ತರಬೇತಿ ನೀಡುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಬೇಬಿ ಹೇಳಿದರು.
ತ್ರಿಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆರಂಭಿಸಿರುವ ಮಹಿಳೆಯರಿಗೆ ಮೂರು ತಿಂಗಳ ಹೊಲಿಗೆ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಮಾತೃ ಶ್ರೀ ಹೇಮಾವತಿ ಹೆಗ್ಗಡೆ ಅವರು ಆರಂಭಿಸಿರುವ ವಿವಿಧ ತರಬೇತಿ ಕಾರ್ಯಗಾರಗಳು ರಾಜ್ಯದ ಜನರ ಮನೆ ಬಾಗಿಲಿಗೆ ತಲುಪುತ್ತಿದೆ. ಪ್ರತಿ ವರ್ಷ ಸಾವಿರಾರು ಮಂದಿ ಟೈಲರಿಂಗ್, ಕಂಪ್ಯೂಟರ್, ಮೊಬೈಲ್ ರಿಪೇರಿ, ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ಸೇರಿದಂತೆ ವಿವಿಧ ತರಬೇತಿಗಳನ್ನು ಪಡೆಯುತ್ತಿದ್ದಾರೆ ಎಂದರು.
ಈ ಹಿಂದೆ ಧರ್ಮಸ್ಥಳದ ತರಬೇತಿ ಕೇಂದ್ರಗಳಿಗೆ ಫಲಾನುಭವಿಗಳು ಪ್ರತಿದಿನ ಹಾಜರಾಗಬೇಕಿತ್ತು. ಈಗ ವ್ಯವಸ್ಥೆ ಬದಲಾಗಿದೆ. ತರಬೇತಿ ಪಡೆಯಬೇಕಾದ ಫಲಾನುಭವಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ವರದಾನವಾಗಲು ಗ್ರಾಮಗಳಲ್ಲಿ ತರಬೇತಿ ವ್ಯವಸ್ಥೆ ಮಾಡಲಾಗಿದೆ. ಇಂತಹ ತರಬೇತಿಯಿಂದ ಪ್ರತಿಯೊಬ್ಬರೂ ಸಬಲರಾಗಲು ಸಾಧ್ಯವಿದೆ ಎಂದು ತಿಳಿಸಿದರು.
ಮಹಿಳೆಯರು ಸ್ವ ಉದ್ಯೋಗದತ್ತ ಒಲವು ತೋರಿರಲಿಲ್ಲ. ಈಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರತಿ ಗ್ರಾಮಗಳಲ್ಲಿ ಮಹಿಳೆಯರ ಗುಂಪು ಆರಂಭಿಸಿದ ಬಳಿಕ ಮಹಿಳೆಯರು ಒಗ್ಗಟ್ಟಾಗಿ ವಿವಿಧ ಉದ್ಯೋಗ ಆರಂಭಿಸಿದ್ದಾರೆ. ಅದಕ್ಕೆ ಬೇಕಾದ ನೆರವು ನೀಡಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿದ್ಧವಾಗಿದೆ. ಗ್ರಾಮದಲ್ಲಿರುವ ಕೆಲವು ಮಹಿಳೆಯರಿಗೆ ಟೈಲರಿಂಗ್ ತರಬೇತಿ ದೊರೆತರೆ ಅವರು ಕೂಡ ಮನೆಯಲ್ಲಿ ಉದ್ಯೋಗ ಆರಂಭಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಇಂತಹ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತರಬೇತಿ ಪಡೆದ ಬಳಿಕ ಮರೆತು ಬಿಡದೆ ಕೂಡಲೆ ಉದ್ಯೋಗ ಆರಂಭಿಸಿದರೆ ಮಹಿಳೆಯರು ಅರ್ಥಿಕವಾಗಿ ಇನ್ನಷ್ಟು ಸದೃಢರಾಗುವರು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಜ್ಞಾನವಿಕಾಸ ಸಮನ್ವಯ ಅಧಿಕಾರಿ ಭಾರತಿ, ಗ್ರಾಪಂ ಸದಸ್ಯ ಅರುಣ್, ಉಷಾ, ಚಿತ್ರ ಇತರರಿದ್ದರು.