ಎನ್.ಆರ್.ಪುರದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ನಿರ್ದೇಶಕರಿಗೆ ಬಿಇಒ ಶಬಾನಾಅಂಜುಮ್ ಪ್ರಮಾಣ ಪತ್ರ ವಿತರಿಸಿದರು.  
ಚಿಕ್ಕಮಗಳೂರು

ಎನ್.ಆರ್.ಪುರ ತಾಲೂಕು ಶಿಕ್ಷಕರ ಸಂಘಕ್ಕೆ ನಿರ್ದೇಶಕರ ಆಯ್ಕೆ

ಎನ್.ಆರ್.ಪುರ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಿಸಬೇಕು ಎಂದು ಬಿಇಒ ಶಬಾನಾ ಅಂಜುಮ್ ಸಲಹೆ ನೀಡಿದರು.
ಬಿಇಒ ಕಚೇರಿ ಸಭಾಂಗಣದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಬಿ.ನಂಜುಂಡಪ್ಪ, ಪ್ರಧಾನ ಕಾರ್ಯದರ್ಶಿ ಶಿಲ್ಪಕುಮಾರಿ, ಖಜಾಂಚಿ ಹೇಮರಾಜ್‌ಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಮೂರು ಸಾಮಾನ್ಯ ಸ್ಥಾನ ಹಾಗೂ ಒಬ್ಬ ಮಹಿಳೆ ಸ್ಥಾನಕ್ಕಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ. ಈ ವರ್ಷ ಎಸ್‌ಎಸ್‌ಎಲ್‌ಸಿ ಯಲ್ಲಿ ಜಿಲ್ಲೆಯಲ್ಲಿ 2ನೇ ಸ್ಥಾನ ಪಡೆದಿದ್ದು ಉತ್ತಮ ಲಿತಾಂಶ ಪಡೆಯಲು ಎಲ್ಲರೂ ಸಹಕಾರ ನೀಡಿದ್ದಾರೆ ಎಂದರು.
ಬಡ್ತಿ ಮುಖ್ಯಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಅಶೋಕ್ ಮಾತನಾಡಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ 50 ಶಿಕ್ಷಕರಿಗೆ ಒಬ್ಬರಂತೆ ನಿರ್ದೇಶಕರನ್ನು ಆಯ್ಕೆ ಮಾಡಲಾಗುವುದು. ಎನ್.ಆರ್.ಪುರ ತಾಲೂಕಿನಲ್ಲಿ 4 ನಿರ್ದೇಶಕರನ್ನು ಚುನಾವಣೆ ಮೂಲಕ, ಮೂವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಿ.ನಂಜುಂಡಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಶಿಲ್ಪಕುಮಾರಿ, ಖಜಾಂಚಿಯಾಗಿ ಹೇಮರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದರು. ಶಿಕ್ಷಣ ಇಲಾಖೆ ವ್ಯವಸ್ಥಾಪಕ ಜಯರಾಂ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸೇವ್ಯಾನಾಯಕ್,ಇಸಿಒ ರಂಗಪ್ಪ, ಮಂಜಪ್ಪ, ರಾಜಾನಾಯಕ್ ಇದ್ದರು.