ಕಡೂರು ಸಂಜೀವಿನಿ ಒಕ್ಕೂಟದ ವಾರ್ಷಿಕ ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕಿ ಎಚ್.ಎಲ್.ಸುಜಾತಾ ಮಾತನಾಡಿದರು. ಪ್ರವೀಣ್, ಮಂಜೇಗೌಡ, ನಂದನ್, ಎಸ್.ಪ್ರದೀಪ್, ಆಶಾ, ದಿಶಾ ಇತರರಿದ್ದರು.  
ಚಿಕ್ಕಮಗಳೂರು

ಮಹಿಳಾ ಸಬಲೀಕರಣಕ್ಕೆ ಸಂಜೀವಿನಿ ಒಕ್ಕೂಟ ಸಹಕರಾರಿ

ಪ್ರಮುಖ ಮುಖ್ಯಾಂಶಗಳು

  • ಸದಸ್ಯರೇ ಹೆಚ್ಚು ಪಾಲುದಾರರು.
  • ಒಕ್ಕೂಟದ ಮೂಲಕ
ಕಡೂರು: ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಂಜೀವಿನಿ ಒಕ್ಕೂಟಗಳು ಸಹಕಾರಿಯಾಗಲಿವೆ ಎಂದು ಜಿಪಂ ಯೋಜನಾ ನಿರ್ದೇಶಕಿ ಎಚ್.ಎಲ್.ಸುಜಾತಾ ತಿಳಿಸಿದರು.
ತಾಪಂನಲ್ಲಿ ನಡೆದ ಕಡೂರು ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಆರ್ಥಿಕ ಬಲವರ್ಧನೆ ಜತೆಗೆ ಸಾಮಾಜಿಕ ಕಳಕಳಿ ಹೊಂದಲು ಒಕ್ಕೂಟಗಳು ಪರಿಣಾಮವಾಗಿ ಕಾರ್ಯನಿರ್ವಹಿಸುತ್ತವೆ. ಇದಕ್ಕೆ ಮಹಿಳಾ ಸದಸ್ಯರೇ ಹೆಚ್ಚು ಪಾಲುದಾರರು. ಆದರೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಂಜೀವಿನಿ ಒಕ್ಕೂಟ ಉತ್ತಮವಾಗಿ ಪ್ರಗತಿ ಹೊಂದಲು ಸಾಧ್ಯ ಎಂದರು.
ಸಾಲ ಪಡೆಯಲು ಕಾರ್ಯವ್ಯಾಪ್ತಿಯನ್ನು ಸೀಮಿತಗೊಳಿಸದೆ ಪಂಚಾಯಿತಿ ವ್ಯವಸ್ಥೆಗೆ ಬಲ ತುಂಬಲು ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಸಂಜೀವಿನಿ ಒಕ್ಕೂಟದ ಮೂಲಕ ನಾಯಕತ್ವ ಗುಣ ಬೆಳೆಸಿಕೊಳ್ಳಬಹುದಾಗಿದೆ. ಕಸ ವಿಲೇವಾರಿ ನಿರ್ವಹಣೆಯನ್ನು ಕೀಳರಿಮೆ ಎಂದು ಭಾವಿಸಬಾರದು. ಜಾಗತಿಕ ಮಟ್ಟದಲ್ಲಿ ಕಸ ವಿಲೇವಾರಿ ಉದ್ಯಮವಾಗಿ ಪರಿವರ್ತನೆಗೊಳ್ಳಲಿದೆ ಎಂದು ತಿಳಿಸಿದರು.
ತಾಪಂ ಇಒ ಸಿ.ಆರ್.ಪ್ರವೀಣ್ ಮಾತನಾಡಿ, ಒಕ್ಕೂಟದ ಯೋಜನೆಯಡಿ ಮಹಿಳೆಯರು ಜೀವನೋಪಾಯ, ಆರೋಗ್ಯ, ನೈರ್ಮಲ್ಯ, ಸಾಮಾಜಿಕ ಅಭಿವೃದ್ಧಿಯಡಿ ಮೂಲಸೌಕರ್ಯಗಳ ಬೇಡಿಕೆಗಳನ್ನು ಸಲ್ಲಿಸಬಹುದು. ಇದರಿಂದ ಸ್ಥಳೀಯ ಮಟ್ಟದಲ್ಲಿ ನಾಯಕತ್ವದ ಗುಣ ಬೆಳೆಸಿಕೊಂಡು ಉತ್ತಮ ತಂಡವನ್ನಾಗಿ ರಚಿಸಿಕೊಳ್ಳಬಹುದಾಗಿದೆ ಎಂದರು.
ಎನ್‌ಆರ್‌ಎಲ್‌ಎಂ ತಾಲೂಕು ಸಮೂಹ ಮೇಲ್ವಿಚಾರಕ ಎಸ್.ಪ್ರದೀಪ್ ಮಾತನಾಡಿ, ತಾಲೂಕಿನ 60 ಗ್ರಾಪಂಗಳ ಒಕ್ಕೂಟದದಲ್ಲಿ 1800 ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದಿಂದ ಸಮುದಾಯ ಬಂಡವಾಳ ನಿಧಿಯಡಿ 14.67 ಕೋಟಿ ರೂ. ಅನುದಾನ ದೊರೆತಿದೆ. 100 ಕೋಟಿ ರೂ. ಗೂ ಹೆಚ್ಚು ವಹಿವಾಟು ನಡೆಸುವ ಮೂಲಕ ಒಕ್ಕೂಟಗಳು ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕ ಮಂಜೇಗೌಡ, ತಾಲೂಕು ವ್ಯವಸ್ಥಾಪಕ ನಂದನ್, ಒಕ್ಕೂಟದ ಅಧ್ಯಕ್ಷೆ ಮನೋರಂಜನಿ, ಕಾರ್ಯದರ್ಶಿ ಶೋಭಾ, ಖಜಾಂಚಿ ದಿಶಾ, ಸುವರ್ಣಮ್ಮ, ದೀಪಿಕಾ, ನಿರಂಜನ್, ಕೀರ್ತನಾ, ರೇಖಾ, ಲೋಕೇಶ್ ಹಾಗೂ ಒಕ್ಕೂಟದ ಸದಸ್ಯರು ಇದ್ದರು.