ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಬಂಡೆಕಲ್ಲು ಕುಸಿದ ಸ್ಥಳವನ್ನು ಆರ್‌ಎಫ್‌ಒ ಮಂಜುನಾಥ್ ವೀಕ್ಷಿಸಿದರು. ಡಿವೈಆರ್‌ಎಫ್‌ಒ ರಂಜಿತ್, ನಾಗರಾಜ್, ಸಿಬ್ಬಂದಿ ವಿಶ್ವನಾಥ್, ದಿನೇಶ್ ಇದ್ದರು.
- ಕುಸಿದ ಬಂಡೆಕಲ್ಲು
- ಬಿದಿರುತಳ ಮತ್ತು ಆಲೆಖಾನ್ ನಡುವಿನ ಗುಡ್ಡ
ಮೂಡಿಗೆರೆ: ಚಾರ್ಮಾಡಿ ಘಾಟ್ ಪ್ರದೇಶದ ಬಿದಿರುತಳ ಹಾಗೂ ಆಲೇಖಾನ್ ನಡುವಿನ ಹೆದ್ದಾರಿ ಬದಿಯ ಗುಡ್ಡದಿಂದ ಶುಕ್ರವಾರ ಕುಸಿದ ಬಂಡೆಕಲ್ಲುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಜೆಸಿಬಿಯಿಂದ ತೆರವುಗೊಳಿಸಿತು.
ಚಾರ್ಮಾಡಿ ಘಾಟ್ ಪ್ರದೇಶದಲ್ಲಿ 10 ದಿನದಿಂದ ನಿರಂತರವಾಗಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಗುಡ್ಡದ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿರುವುದೇ ಬಂಡೆಕಲ್ಲು ಕುಸಿತಕ್ಕೆ ಕಾರಣ. ಬಂಡೆಕಲ್ಲು ಕುಸಿದ ಸ್ಥಳದಲ್ಲಿ ರಸ್ತೆಗೆ ಹಾನಿಯಾಗದಿದ್ದರೂ ಘಾಟ್ ಪ್ರದೇಶದ ಹೆದ್ದಾರಿ ಸಂಚಾರಕ್ಕೆ ಸುರಕ್ಷೆ ಕುರಿತು ಆತಂಕ ಉಂಟಾಗಿದೆ. ಬಂಡೆಕಲ್ಲು ಕುಸಿದಾಗ ಚಾಲಕರು ವಾಹನಗಳನ್ನು ಕೆಲಕಾಲ ಹೆದ್ದಾರಿಯಲ್ಲಿ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಾಟ್ ವ್ಯಾಪ್ತಿಯಲ್ಲಿ ಮಳೆ ಇನ್ನಷ್ಟು ಹೆಚ್ಚಾಗಲಿದೆ. ಗುಡ್ಡ, ಬಂಡೆಕಲ್ಲು ಕುಸಿತ ಹೆಚ್ಚು ಸಂಭವಿಸುವ ಸಾಧ್ಯತೆಯಿದೆ. ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ.
ಆರ್‌ಎಫ್‌ಒ ಮಂಜುನಾಥ್ ಮಾತನಾಡಿ, ಚಾರ್ಮಾಡಿ ಘಾಟ್ ಹೆದ್ದಾರಿಯ ಬಿದಿರುತಳ ಮತ್ತು ಆಲೆಖಾನ್ ನಡುವಿನ ಗುಡ್ಡದಿಂದ ಬಂಡೆಕಲ್ಲು ರಸ್ತೆಗೆ ಕುಸಿದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಕೊಟ್ಟಿಗೆಹಾರದಲ್ಲಿ ಜೆಸಿಬಿ ಇರಿಸಲಾಗಿದೆ. ಗುಡ್ಡ ಕುಸಿತ, ಬಂಡೆಕಲ್ಲು ಕುಸಿತ ಉಂಟಾದರೆ ಜೆಸಿಬಿಯಿಂದ ತೆರವುಗೊಳಿಸಲಾಗುತ್ತದೆ. ಬಂಡೆಕಲ್ಲು ಕುಸಿದ ಸ್ಥಳಕ್ಕೆ ಶನಿವಾರ ಅರಣ್ಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ತಹಸೀಲ್ದಾರ್ ಹಾಗೂ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು ಇತರ ರಸ್ತೆಗಳ ಬದಿಯಲ್ಲಿ ಒಣಗಿರುವ ಮರಗಳು ಮತ್ತು ರಸ್ತೆಗೆ ಚಾಚಿಕೊಂಡಿರುವ ಮರಗಳನ್ನು ತೆರವುಗೊಳಿಸುವಂತೆ ತಾಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕಿ ನಯನಾ ಮೋಟಮ್ಮ ಸೂಚಿಸಿದ್ದರು. ಅದರಂತೆ ಎಲ್ಲ ಮರಗಳನ್ನು ಗುರುತಿಸಿ ಡಿಸಿಎಫ್ ಅವರಿಗೆ ವರದಿ ನೀಡಲಾಗಿದೆ. ಡಿಸಿಎಫ್ ಅವರಿಂದ ಅನುಮೋದನೆ ದೊರೆತ ಕೂಡಲೆ ಮರಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.