ತರೀಕೆರೆ ತಾಪಂನಲ್ಲಿ ಎಸ್.ಜಾನಕಿ ಮತ್ತು ಡಾ. ಆರ್.ದೇವಾನಂದ್ ಸ್ಮರಣೆ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ದಾದಾಪೀರ್ ಮಾತನಾಡಿದರು. ಸುನೀತಾ, ಬಿ.ಎಸ್.ಭಗವಾನ್, ಎಸ್.ಸುರೇಶ್‌ಚಂದ್ರ, ನಾಗಜ್ಯೋತಿ, ಟಿ.ಎಸ್.ಮೋಹನ್‌ಕುಮಾರ್ ಇತರರಿದ್ದರು.
- ಕ್ಲಬ್ ಸಹಯೋಗದಲ್ಲಿ
- ಸದಾ ತುಡಿಯುವ ಮನಸ್ಸು
ತರೀಕೆರೆ: ಗಾಯನದಲ್ಲಿ ಆಸಕ್ತಿ ಇರುವವರಿಗೆ ಗಾಯಕಿ ಎಸ್.ಜಾನಕಿ ಪ್ರೇರಣೆಯಾಗಿದ್ದಾರೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸುನೀತಾ ಹೇಳಿದರು.
ತಾಪಂನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಎಸ್.ಜಾನಕಿ ಗೀತನಮನ ಮತ್ತು ಸಾಮಾಜಿಕ ಕಾರ್ಯಕರ್ತ ಡಾ. ಆರ್.ದೇವಾನಂದ್ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊರ ರಾಜ್ಯದವರಾದರೂ ಕನ್ನಡ ಭಾಷೆಯಲ್ಲಿ ಸಾವಿರಾರು ಹಾಡು ಹಾಡಿ ಇಲ್ಲಿಯೇ ಬದುಕಿ, ಕನ್ನಡದ ನೆಲದಲ್ಲೇ ಜೀವನ ಯಾನ ಮುಗಿಸಿದ ಶ್ರೇಷ್ಠ ಗಾಯಕಿ ಎಸ್.ಜಾನಕಿ ಎಂದು ಬಣ್ಣಿಸಿದರು.
ಅವರು ಹಾಡಿದ ಹಾಡುಗಳು ಅಮರ ಗೀತೆಗಳಾಗಿದ್ದು, ಯುವ ಪ್ರತಿಭೆಗಳು ಆ ಹಾಡುಗಳನ್ನು ಗುನುಗುವ ಮೂಲಕವೇ ಸ್ವರ, ಆಲಾಪನೆಗಳನ್ನು ಕಲಿತುಕೊಳ್ಳಬಹುದು. ಇಂಥ ಗಾಯಕಿಯನ್ನು ಕಳೆದುಕೊಂಡ ಸಾಂಸ್ಕೃತಿಕ ಲೋಕ ಬಡವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ದಾದಾಪೀರ್ ಮಾತನಾಡಿ, ಡಾ. ಆರ್.ದೇವಾನಂದ್ ಬಿಜೆಪಿ ಶಿಸ್ತಿನ ಸಿಪಾಯಿಯಾದರೂ, ಕೆಲವೊಮ್ಮೆ ಪಕ್ಷದ ಪರಿಧಿ ಮೀರಿ ನಿಂತ ಉದಾಹರಣೆಗಳಿವೆ. ಮಾನವೀಯ ಮೌಲ್ಯಗಳಿಗೆ ಸದಾ ತುಡಿಯುವ ಮನಸ್ಸು ಹೊಂದಿದ್ದ ಅವರು, ಕರೊನಾ ಸಂದರ್ಭದಲ್ಲಿ ಉಚಿತ ಮಾಸ್ಕ್ ವಿತರಿಸಿ ಜನರ ಆರೋಗ್ಯ ಕಾಪಾಡುವ ಕೆಲಸಕ್ಕೆ ಮುಂದಾಗಿದ್ದರು. ಅನಾರೋಗ್ಯದ ನಡುವೆಯೇ ವೃದ್ಧಾಶ್ರಮ, ಮಂತ್ರಾಲಯದಲ್ಲವಿಶ್ರಾಂತಿ ತಾಣ ನಿರ್ಮಿಸುವ ಬಯಕೆ ಹೊಂದಿದ್ದರು. ಭದ್ರಾ ಮೇಲ್ದಂಡೆ ಯೋಜನೆ ವಿರೋಧಿ ಹೋರಾಟದ ನೇತೃತ್ವ ವಹಿಸಿದ್ದ ಅವರು ರ್ಸೇಸಿ ಕಾಯ್ದೆ ರದ್ದತಿಗಾಗಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದರು ಎಂದು ಸ್ಮರಿಸಿದರು.
ಗಾಯಕಿಯರಾದ ಲತಾ, ರೋಹಿಣಿ, ವಿಜಯಾ, ವಿನಯಾ, ಗೀತಾ ನೀಲಾಂಬಿಕೆ ಅವರು ಎಸ್.ಜಾನಕಿ ಅವರಿಗೆ ಗೀತ ನಮನ ಸಲ್ಲಿಸಿದರು. ಗಾಯಕ ಬಿ.ಎಸ್.ಭಗವಾನ್, ವಕೀಲ ಎಸ್.ಸುರೇಶ್‌ಚಂದ್ರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಸಿದ್ರಾಮಪ್ಪ, ಲೇಖಕ ಟಿ.ಎಸ್.ಮೋಹನ್‌ಕುಮಾರ್, ಪ್ರಮುಖರಾದ ಟಿ.ಜಿ.ಸದಾನಂದ್, ನಾಗಜ್ಯೋತಿ, ಮಧುಸೂದನ್ ಕಕ್ರಿ ಇತರರಿದ್ದರು.