ಕಡೂರು ತಾಲೂಕಿನ ಕಚ್ಚಾ ರಸ್ತೆಯಲ್ಲಿರುವ ರಂಗೇನಹಳ್ಳಿ ಮಾರ್ಗದ ಚಿಕ್ಕಾಲಗಟ್ಟೆ, ಗಾಳಿಗುತ್ತಿ ಲಕ್ಕೇನಹಳ್ಳಿ ಸಂಪರ್ಕಗೊಳ್ಳುವ ರಸ್ತೆಗೆ ಟಾರ್ ಭಾಗ್ಯ ಕಾಣದಿರುವುದು.
ಕಡೂರು: ಭೌಗೋಳಿಕವಾಗಿ ರಸ್ತೆಗಳ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿರುವ ಬಯಲುಪ್ರದೇಶದ ತಾಲೂಕಿನಲ್ಲಿ ಮುಖ್ಯ ರಸ್ತೆಗಳು ಸುವ್ಯವಸ್ಥಿತವಾಗಿದ್ದರೂ ಕೆಲ ಗ್ರಾಮೀಣ ಒಳಭಾಗದ ರಸ್ತೆಗಳಿಗೆ ಕಾಯಕಲ್ಪವಾಗಬೇಕಿದೆ.
ತಾಲೂಕಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಇವೆ. ಇವೆರಡೂ ರಸ್ತೆಗಳ ನಿರ್ವಹಣೆ ವ್ಯವಸ್ಥಿತವಾಗಿವೆ. ಆದರೆ ಬಹುತೇಕ ಜಿಲ್ಲಾ ಮುಖ್ಯರಸ್ತೆಗಳು, ಉಪ ರಸ್ತೆಗಳು ಇನ್ನೂ ಅಭಿವೃದ್ಧಿಗೊಳ್ಳಬೇಕಿದೆ. ಕಡೂರು-ಮರವಂಜಿ ರಸ್ತೆ ಹಾದು ಹೋಗಿರುವ ದಾರಿಯಲ್ಲಿಯೇ ಇತ್ತೀಚೆಗೆ ಜಲಜೀವನ್ ಮಿಷನ್ ಕಾಮಗಾರಿ ನಡೆಯುತ್ತಿದೆ. ಸುಮಾರು ಐದು ಅಡಿ ಆಳದ ಚರಂಡಿ ಒಡೆದು ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ.
ಈ ಪೈಪ್‌ಗಳ ಅಳವಡಿಕೆಗಾಗಿ ರಸ್ತೆಯ ಪಕ್ಕಕ್ಕೆ ಟ್ರಂಚ್ ತೆಗೆಯಲಾಗುತ್ತಿದೆ. ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದ ಈ ಟ್ರಂಚ್‌ಗಳು ಕುಸಿದಿವೆ. ರಸ್ತೆ ಪಕ್ಕದಲ್ಲೇ ಮಣ್ಣು ಕುಸಿದು ರಸ್ತೆಯೂ ಹಾಳಾಗುತ್ತಿದೆ. ಕೆಲವೇ ತಿಂಗಳ ಹಿಂದೆ ಈ ರಸ್ತೆಗೆ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಮರು ಡಾಂಬರೀಕರಣ ಮಾಡಲಾಗಿದ್ದು, ಪೈಪ್‌ಗಳಿಗಾಗಿ ತೆಗೆದ ಗುಂಡಿ ಸರಿಯಾಗಿ ಮುಚ್ಚದಿರುವ ಕಾರಣದಿಂದ ವಾಹನಗಳ ಅಪಘಾತ ಸಂಖ್ಯೆಯೂ ಹೆಚ್ಚುತ್ತಿದೆ. ಕೆಲವೆಡೆಯಂತೂ ತೆಗೆದ ಮಣ್ಣನ್ನು ಹಾಗೆಯೇ ಬಿಡುತ್ತಿರುವುದು ವಾಹನ ಸಂಚಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಂಗಳೂರು-ಹೊನ್ನಾವರ (ಬಿಎಚ್ ರಸ್ತೆ) ರಸ್ತೆಯ ಬೈಪಾಸ್ ರಸ್ತೆ ಹಾದು ಹೋಗಿರುವ ಮಲ್ಲೇಶ್ವರ ಮೇಲ್ಸೇತುವೆ ಬಳಿಯ ಸರ್ವಿಸ್ ರಸ್ತೆ ಇನ್ನೂ ವ್ಯವಸ್ಥಿತವಾಗಿಲ್ಲ. ಪಟ್ಟಣಕ್ಕೆ ಪ್ರವೇಶ ಮಾಡುವ ಜಾಗದಲ್ಲಿರುವ ವೇದಾ ನದಿ ಸೇತುವೆಯ ಎರಡೂ ಕಡೆ ಗುಂಡಿಗಳಿದ್ದು ರಸ್ತೆಯೂ ಕಿರಿದಾಗಿದೆ. ಅಲ್ಲಿ ಸುರಕ್ಷಿತ ವಾಹನ ಸಂಚಾರ ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ಬರುವ ತಂಗಲಿ ಕ್ರಾಸ್ ಬಳಿ ರಸ್ತೆಯೇ ಇಲ್ಲದಾಗಿದೆ. ಹೆದ್ದಾರಿಯಿಂದ ತಂಗಲಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಸಾಗುವುದೇ ಹರಸಾಹಸವಾಗಿದೆ. ಇಡೀ ರಸ್ತೆ ಗುಂಡಿಗಳಿಂದ ಕೂಡಿದ್ದು, ಇದೇ ರಸ್ತೆ ಚಿಕ್ಕ ತಂಗಲಿ, ಕಾನುಗೊಂಡನಹಳ್ಳಿ, ಮಲ್ಲಿದೇವಿಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯ ಆರಂಭದ ಸುಮಾರು ಒಂದೂವರೆ ಕಿ.ಮೀ. ರಸ್ತೆ ಪೂರ್ಣ ಹದಗೆಟ್ಟಿದೆ. ಇದರಿಂದ ಈ ಭಾಗದ ಗ್ರಾಮಸ್ಥರಿಗೆ ತೊಂದರೆಯಾಗಿದೆ.