ಕೊಪ್ಪದ ಗಬ್ಬಾನೆ ಪಂಚಲಿಂಗೇಶ್ವರ ದೇವಸ್ಥಾನ ಸಮೀಪ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಟಿ.ಡಿ.ರಾಜೇಗೌಡ ಭೂಮಿ ಪೂಜೆ ನೆರವೇರಿಸಿದರು.  
ಚಿಕ್ಕಮಗಳೂರು

ಗ್ರಾಮೀಣ ರಸ್ತೆ ಅಭಿವೃದ್ಧಿಗಾಗಿ ಸರ್ಕಾರದಿಂದ 50 ಕೋಟಿ ರೂ. ಮಂಜೂರು

ಕೊಪ್ಪ:ಲೋಕೋಪಯೋಗಿ ಇಲಾಖೆ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಿದ್ದು, ಗ್ರಾಮೀಣ ರಸ್ತೆ ಅಭಿವೃದ್ಧಿಗೆ 50 ಕೋಟಿ ರೂ. ಮಂಜೂರಾಗಿದೆ. ಇನ್ನೂ 25 ಲಕ್ಷ ರೂ. ಸಿಗುವ ಅಂದಾಜಿದ್ದು, ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಗಬ್ಬಾನೆ ಪಂಚಲಿಂಗೇಶ್ವರ ದೇವಸ್ಥಾನ ಸಮೀಪ 70 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕಾಚಗಲ್, ತನೂಡಿ ರಸ್ತೆಯಿಂದ ಸುಂಕುರ್ಡಿ ರಸ್ತೆ ಅಭಿವೃದ್ಧಿಗೆ 10 ಲಕ್ಷ, ಆಯುರ್ವೇದ ಕಾಲೇಜು ಹಾಸ್ಟೆಲ್ ರಸ್ತೆಗೆ 7 ಲಕ್ಷ, ಗಬ್ಬಾನೆ ರಸ್ತೆ ದುರಸ್ತಿಗೆ 16 ಲಕ್ಷ, ಮುಸುರೆಹಳ್ಳ ಕಾಲುಸಂಕ ನಿರ್ಮಾಣಕ್ಕೆ 40 ಲಕ್ಷ ಮಂಜೂರು ಮಾಡಲಾಗಿದೆ ಎಂದರು.

ಕಳೆದ ಬಾರಿ ಮುಖ್ಯಮಂತ್ರಿ ಶೃಂಗೇರಿ ಕ್ಷೇತ್ರಕ್ಕೆ 12.50 ಕೋಟಿ ರೂ. ಕೊಟ್ಟಿದ್ದರು. ಇಲ್ಲಿನ ಸಮುದಾಯ ಭವನ ನಿರ್ಮಾಣಕ್ಕೆ 70 ಲಕ್ಷ ರೂ. ವೆಚ್ಚದ ಕಾಮಗಾರಿ ಆರಂಭವಾಗಲಿದೆ. ಅರೂರು ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಪಟ್ಟಣ ವ್ಯಾಪ್ತಿಗೆ ಬರುವ ಆಯುರ್ವೇದ ಕಾಲೇಜುವರೆಗಿನ ರಸ್ತೆ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 8.9 ಕಿಲೋ ಮೀಟರ್ ದೂರದ ಪಿಎಂಜಿಎಸ್‌ವೈ ರಸ್ತೆ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.

ಭೂತರಾಯ, ಪಂಚಲಿಂಗೇಶ್ವರ ದೇವಸ್ಥಾನ ಅತ್ಯಂತ ಕಾರ್ಣಿಕ ಕ್ಷೇತ್ರ. ಅನಾದಿ ಕಾಲದಿಂದ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿದ ಉದಾಹರಣೆ ನಮ್ಮ ಕಣ್ಣ ಮುಂದಿವೆ. ಹರಕೆ ಸಂದರ್ಭದಲ್ಲಿ 25 ಸಾವಿರ ಜನ ಬರುತ್ತಾರೆ. ಅಷ್ಟೂ ಜನರಿಗೆ ಭೋಜನ ವ್ಯವಸ್ಥೆ ನಡೆಯುತ್ತಿದೆ. ನನಗೂ ಅನ್ಯಾಯವಾದಾಗ ಇಲ್ಲಿಗೆ ಬಂದು ಸಾಮೂಹಿಕ ಪ್ರಾರ್ಥನೆ ಮಾಡಲಾಗಿತ್ತು. ನಾವು ಯಾವುದೇ ತರಹದ ಅನ್ಯಾಯ ಮಾಡಿಲ್ಲ. ಬೇರೆಯವರು ಮಾಡಿದ ತಪ್ಪಿಗೆ ಅವರಿಗೆ ಒಳ್ಳೆ ಬುದ್ಧಿ ಕೊಡು ಎಂದು ಕೇಳುತ್ತೇನೆ. ಚುನಾವಣೆ ದುಷ್ಟಕೃತ್ಯಕ್ಕೆ ನಾನು 5ನೇ ಬಲಿಯಾಗಿದ್ದೇನೆ. ಅದಕ್ಕೆ ತಡೆಯಾಗಬೇಕು. ತಪ್ಪು ಮಾಡಿದವರಿಗೆ ಕಾನೂನಾತ್ಮಕವಾಗಿ ಶಿಕ್ಷೆಯಾಗಬೇಕು ಎಂದರು.

ಗಬ್ಬಾನೆ ದೇವಸ್ಥಾನ ಸಮಿತಿ ಅಧ್ಯಕ್ಷ ಕೇಶವ ಗೌಡ, ಶಿವಾನಂದ್, ವಿಕಾಸ್ ಬೇಗಾನೆ, ಜಗದೀಶ್, ಓಣಿತೋಟ ರತ್ನಾಕರ್, ನುಗ್ಗಿ ಮಂಜುನಾಥ್, ಬಿ.ಪಿ.ಚಿಂತನ್, ನಾರ್ವೆ ಅಶೋಕ್, ಅನ್ನಪೂರ್ಣ ನರೇಶ್, ನಾಗರತ್ನಾ, ಎಲಿಯಾಸ್ ಪಿಂಟೊ, ಚೇತನ್, ಸುಬ್ರಹ್ಮಣ್ಯ ಹುಲುಗಾರು ಇದ್ದರು.

ಕೊಪ್ಪ, ಶೃಂಗೇರಿ ರಸ್ತೆ ಅಗಲೀಕರಣ

ಕೊಪ್ಪದ ಮೇಲಿನಪೇಟೆ ಕಾಂಕ್ರೀಟ್ ರಸ್ತೆ ಮೇಲೆ ಟಾರ್ ನಿಲ್ಲುವುದಿಲ್ಲ. ರಸ್ತೆ ನಿರ್ಮಾಣವಾಗಿ ದಶಕಗಳೇ ಕಳೆದಿವೆ. ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಅಭಿವೃದ್ಧಿಗೆ ಅಡ್ಡಗಾಲು ಹಾಕಿ ರಾಜಕೀಯ ಮಾಡುವುದನ್ನು ಮೊದಲು ನಿಲ್ಲಿಸಿ. ನಮ್ಮ ಅಧಿಕಾರವಧಿಯಲ್ಲಿ ಅಭಿವೃದ್ಧಿ ಕೆಲಸಕ್ಕೆ ಆದ್ಯತೆ ನೀಡಲಾಗಿದೆ. ಮುಂದಿನ ವರ್ಷ ಶೃಂಗೇರಿ, ಕೊಪ್ಪ ಪಟ್ಟಣ ಮುಖ್ಯ ರಸ್ತೆ ವಿಸ್ತರಣೆ, ಪಾದಚಾರಿ ಮಾರ್ಗ, ಸುಸಜ್ಜಿತ ಚರಂಡಿ ವ್ಯವಸ್ಥೆ ಕೈಗೆತ್ತಿಕೊಳ್ಳಗುವುದು. ತಾಲೂಕಿನ ಚಿಕ್ಕನಕೊಡಿಗೆಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ನಡೆದಿದ್ದು, ಆರೋಪಿ ಪತ್ತೆಗೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.