ಕಡೂರು: ಆಸಂದಿ ಗ್ರಾಮದಲ್ಲಿ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಡಿಜಿಟಲ್ ಅರೆಸ್ಟ್ ಮಾಡಿ ವ್ಯಕ್ತಿಯೊಬ್ಬರಿಂದ 48.50 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ.
ಮಾ.15ರಂದು ಆಸಂದಿ ಗ್ರಾಮದ ಎ.ಆರ್.ಲೋಕೇಶಪ್ಪ ಎಂಬುವವರ ಮೊಬೈಲ್‌ಗೆ ಕರೆ ಮಾಡಿದ ಆರೋಪಿ ನಾನು ಸಿಬಿಐ ಅಧಿಕಾರಿ ವಿಜಯ್. ನೀವು ನರೇಶ್ ಗೋಯೆಲ್ ಪ್ರಕರಣದಲ್ಲಿ ಭಾಗಿಯಾಗಿ ನಕಲಿ ಅಕೌಂಟ್ ತೆರೆದು ಜನರ ಹಣವನ್ನು ನಿಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿದ್ದಿರ ಎಂದು ತಿಳಿಸಿದ್ದಾನೆ. ನಂತರ ಮತ್ತೊಂದು ನಂಬರ್‌ನಿಂದ ಕರೆ ಮಾಡಿ ನಾನು ಹೇಳುವ ತನಕ ಕೊಠಡಿಯಿಂದ ಹೊರಗೆ ಬರಬಾರದು ಎಂದು ನಂಬಿಸಿದ್ದಾನೆ. ಮೇಲಾಧಿಕಾರಿಗಳ ವಿಚಾರಣೆ ತನಕ ನೀವು ನನ್ನ ವಶದಲ್ಲಿರಬೇಕು. ನಾನು ಹೇಳುವತನಕ ನೀವು ಯಾರ ಜತೆ ಮಾತನಾಡಬಾರದು, ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಬೆದರಿಸಿದ್ದಾನೆ.
ನಂತರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ನಾನು ಹೇಳಿದ ಆರ್‌ಬಿಐ ಖಾತೆಗೆ ವರ್ಗಾವಣೆ ಮಾಡಬೇಕು. ನೀವು ತಪ್ಪು ಮಾಡಿಲ್ಲ ಎಂದು ಕಂಡು ಬಂದರೆ ತನಿಖೆ ನಂತರ ನಿಮ್ಮ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತೇನೆ ಎಂದು ಹೇಳಿ ಉಳಿತಾಯ ಖಾತೆಗಳಿಂದ ಅವನು ಹೇಳಿದ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 48.50 ಲಕ್ಷ ಹಣವನ್ನು ವರ್ಗಾವಣೆ ಮಾಡಿದ್ದಾರೆ. ನಂತರ ಅನುಮಾನ ಬಂದು ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿರುವುದು ತಿಳಿದು ಬಂದೆ. ಈ ಕುರಿತು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.