ಶಾಸಕ ಟಿ.ಡಿ.ರಾಜೇಗೌಡ  
ಚಿಕ್ಕಮಗಳೂರು

ಶೃಂಗೇರಿ ಅಭಿವೃದ್ಧಿಗಾಗಿ 300 ಕೋಟಿ ರೂ.

ಎನ್.ಆರ್.ಪುರ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಯಾರಿಗೂ ನೆಮ್ಮದಿ ಇಲ್ಲದಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಕುದುರೆಗುಂಡಿ ಸರ್ಕಲ್ನಲ್ಲಿ ಎನ್.ಆರ್.ಪುರ-ಕೊಪ್ಪ ತಾಲೂಕಿನ ಕಾಂಗ್ರೆಸ್ ನೇತೃತ್ವದಲ್ಲಿ ‘ಮೋದಿ ಇಳಿಸಿ-ದೇಶ ಉಳಿಸಿ’ ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಶೃಂಗೇರಿ ಕ್ಷೇತ್ರದ ಅಭಿವೃದ್ಧಿಗೆ 300 ಕೋಟಿ ರೂ. ಮಂಜೂರಾಗಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಕುದುರೆಗುಂಡಿ-ಮುಡುಬ ರಸ್ತೆಗೆ ಹಿಂದೆ 8 ಕೋಟಿ ರೂ. ಮಂಜೂರು ಮಾಡಿಸಿದ್ದೆ. ಮತ್ತೆ 5 ಕೋಟಿ ರೂ. ಮಂಜೂರಾಗಿದೆ. ಚಿಕ್ಕಮಗಳೂರು-ಬಾಳೆಹೊನ್ನೂರು-ಜಯಪುರ ರಸ್ತೆಗೆ 70 ಕೋಟಿ ರೂ. ಮಂಜೂರಾಗಿದೆ. ಸಿ.ಆರ್.ಎಫ್. ಪಂಡ್‌ನಿಂದ 50 ಕೋಟಿ ರೂ. ತಂದಿದ್ದೇನೆ. ಕೊಪ್ಪ, ಜಯಪುರದಲ್ಲಿ ಸುಸಜ್ಜಿತ ಆಸ್ಪತ್ರೆ ಆಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಬಡವರಿಗೆ ಉದ್ಯೋಗ ನೀಡಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಗಿತ್ತು. ಇದರಿಂದ ಬಡವರಿಗೆ ಉದ್ಯೋಗ ಸಿಕ್ಕಿತ್ತು. ಈಗ ಬಿಜೆಪಿ ಸರ್ಕಾರ ಅದನ್ನು ಬದಲಿಸಿದ್ದು 125 ದಿನ ಮಾತ್ರ ಉದ್ಯೋಗ ಸಿಗಲಿದೆ. ರಾಜ್ಯದ ತೆರಿಗೆಯನ್ನು ಕೇಂದ್ರ ವಸೂಲಿ ಮಾಡಿ ಬೆಲೆ ಏರಿಕೆ ಮಾಡುತ್ತಿದೆ. ಗ್ಯಾಸ್, ರಸಗೊಬ್ಬರ, ಪೆಟ್ರೋಲ್, ಡೀಸೆಲ್, ಬಂಗಾರದ ಬೆಲೆ ಗಗನಕ್ಕೇರಿದೆ. ಡಿಎಪಿ, ಯೂರಿಯಾ ಗೊಬ್ಬರ ಕೊರತೆ ಇದೆ ಎಂದು ಆರೋಪಿಸಿದರು. 
ಕೆಪಿಸಿಸಿ ವಕ್ತಾರ ಸುಧೀರ್‌ಕುಮಾರ್ ಮುರೊಳ್ಳಿ ಮಾತನಾಡಿ, ಮೋದಿ ಅಧಿಕಾರಕ್ಕೆ ಬಂದ ತಕ್ಷಣ ಅಚ್ಛೇ ದಿನ್ ಬರುತ್ತದೆ ಎಂದು ಬಿಜೆಪಿ ಪ್ರಚಾರ ಮಾಡಿತ್ತು. 12 ವರ್ಷವಾದರೂ ಅಚ್ಛೇ ದಿನ್ ಬರಲಿಲ್ಲ. ಅಡುಗೆ ಎಣ್ಣೆ 200 ರೂ.ಗೆ, ಮೈಲುತುತ್ತು 300ರಿಂದ 500ಕ್ಕೆ ಏರಿಕೆಯಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಗ್ಯಾಸ್ ಬೆಲೆ 400 ರೂ.ರಿಂದ 1200 ರೂ.ಗೆ ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ 4 ಬಾರಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ನುಗ್ಗಿ ಮಂಜುನಾಥ್, ಕುದುರೆಗುಂಡಿ ದೀಪಕ್, ಸುದೀಪ್ ಹೆಗ್ಡೆ, ಕೊಪ್ಪ ರಜತ್ ಗೌಡ, ದುರ್ಗಾಚರಣ, ಎನ್.ಪಿ.ರಮೇಶ, ಬಿ.ಕೆ.ನಾರಾಯಣಸ್ವಾಮಿ, ಕೆರೆಮನೆ ರತ್ನಾಕರ್, ಮನೋಹರ್,ಶ್ರೀಜಿತ್, ಎನ್.ರವಿ, ಬಿಂತ್ರವಳ್ಳಿ ಶಾಂತಕುಮಾರ್ ಮತ್ತಿತರರಿದ್ದರು.