ಬನ್ನೂರು ಗ್ರಾಪಂನ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಟಿ.ಡಿ.ರಾಜೇಗೌಡ ಶಂಕುಸ್ಥಾಪನೆ ನೆರವೇರಿಸಿದರು. 
ಚಿಕ್ಕಮಗಳೂರು

ಶೃಂಗೇರಿ ಕ್ಷೇತ್ರ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 200 ಕೋಟಿ ರೂ.

ಬಾಳೆಹೊನ್ನೂರು: ಶೃಂಗೇರಿ ಕ್ಷೇತ್ರದಲ್ಲಿ ವಿವಿಧ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಗೆ 200 ಕೋಟಿಗೂ ಅಧಿಕ ಅನುದಾನ ಮಂಜೂರಾಗಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಬನ್ನೂರು ಗ್ರಾಪಂನಿಂದ ನೂತನವಾಗಿ ನಿರ್ಮಿಸಿರುವ ಘನ ತ್ಯಾಜ ವಿಲೇವಾರಿ ಘಟಕ ಉದ್ಘಾಟನೆ ಹಾಗೂ ಗ್ರಾಪಂ ನೂತನ ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ. ಕಳೆದ ಒಂದೆರಡು ದಿನ ಕೆಲವೆಡೆ ಮಳೆ ಬಂದಿದ್ದು, ಅದರಿಂದ ಕಾಮಗಾರಿ ಸ್ವಲ್ಪ ನಿಧಾನವಾಗಿದೆ. ಮಳೆ ಕಡಿಮೆಯಾದ ತಕ್ಷಣ ಮತ್ತೆ ಆರಂಭಿಸಲಿದ್ದಾರೆ. ಮುತ್ತಿನಕೊಪ್ಪ ಭಾಗದಿಂದ ನಡೆಯುತ್ತಿರುವ ಗುಂಡಿಮುಚ್ಚುವ ಕಾರ್ಯ ಗುಣಮಟ್ಟದಿಂದ ಕೂಡಿದೆ. ಕ್ಷೇತ್ರದಲ್ಲಿ ಮೊದಲು ಗುಂಡಿಮುಚ್ಚಿ, ನಂತರ ಅಗತ್ಯವಿರುವಲ್ಲಿ ಮರುಡಾಂಬರೀಕರಣ ಮಾಡಲಾಗುವುದು ಎಂದರು.
ಭದ್ರಾನದಿ ಸೇತುವೆ ಕಾಮಗಾರಿ ವಿಳಂಬ ಕುರಿತು ಇಂದೂ ಸಹ ಅಧಿಕಾರಿಗಳು, ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಲಾಗಿದೆ. ಗುತ್ತಿಗೆದಾರನಿಗೆ ಹಣದ ಕೊರತೆ ಇಲ್ಲ ಈಗಾಗಲೇ ಶೇ.75 ಅನುದಾನ ನೀಡಲಾಗಿದೆ. ಗುತ್ತಿಗೆದಾರ ಕಾಮಗಾರಿ ವಿಳಂಬ ಮಾಡುತ್ತಿರುವ ಕುರಿತು ಬ್ಲಾಕ್ ಲೀಸ್ಟ್‌ಗೆ ಸೇರಿಸಲು ಶಿಾರಸ್ಸು ಮಾಡಬಹುದು. ಕಪ್ಪುಪಟ್ಟಿಗೆ ಸೇರಿಸಲು ಶಿಾರಸ್ಸು ಮಾಡಿದರೆ ಗುತ್ತಿಗೆದಾರ ಯಾವುದಾದರೂ ಕಾರಣವಿಟ್ಟು ಕೋರ್ಟ್‌ಗೆ ಹೋಗುವ ಸಾಧ್ಯತೆಯಿದೆ. ಇದರಿಂದ ಕಾಮಗಾರಿ ವಿಳಂಬವಾಗಲಿದೆ ಎಂದರು.

ಟಾಸ್ಕ್‌ಪೋರ್ಸ್ ಸಮಿತಿ ರಚನೆ

ಒತ್ತುವರಿ ಸಮಸ್ಯೆ ಸರಿಪಡಿಸಲು ಈಗಾಗಲೇ ಜಿಲ್ಲಾ ಹಂತದಲ್ಲಿ ಅಧಿಕಾರಿಗಳ ಟಾಸ್ಕ್‌ಪೋರ್ಸ್ ಸಮಿತಿ ರಚನೆಯಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಸರ್ಕಾರದ ಹಂತದಲ್ಲಿ ಮಲೆನಾಡು ಭಾಗದ ಒಬ್ಬ ಶಾಸಕರನ್ನು ಸಮಿತಿಗೆ ಸದಸ್ಯರನ್ನಾಗಿ ತೆಗೆದುಕೊಳ್ಳುವಂತೆ ಒತ್ತಾಯ ಮಾಡಲಾಗಿದೆ. ಜಿಲ್ಲಾ ಹಂತದಲ್ಲಿ ಶಾಸಕರನ್ನು ಸಮಿತಿಗೆ ತೆಗೆದುಕೊಳ್ಳಲು ಒತ್ತಾಯಿಸಲಾಗಿತ್ತು. ಆದರೆ ಅಧಿಕಾರಿಗಳು ಈ ಬಗ್ಗೆ ನಮಗೆ ಮನವರಿಕೆ ಮಾಡಿಕೊಟ್ಟಿದ್ದು, ನಿಪಕ್ಷಪಾತವಾಗಿ ಸಮಿತಿಯಲ್ಲಿ ತೀರ್ಮಾನಗಳು ಆಗಬೇಕು. ಯಾರಿಗೂ ಅನ್ಯಾಯವಾಗಬಾರದು ಎಂಬ ದೃಷ್ಟಿಯಿಂದ ಅಧಿಕಾರಿಗಳ ಟಾಸ್ಕ್‌ಪೋರ್ಸ್ ಸಮಿತಿ ರಚನೆಯಾಗಿದೆ. ರಾಜ್ಯ ಸಮಿತಿಯಲ್ಲಿ ಅರಣ್ಯ ಸಚಿವರು, ಕಂದಾಯ ಸಚಿವರು, ಕಂದಾಯ ಕಾರ್ಯದರ್ಶಿ ಮುಂತಾದವರು ಇರಬಹುದು. ಈ ಸಮಿತಿ ಈಗಾಗಲೇ ರಚನೆಯಾಗುತ್ತಿದೆ. ಇದರಲ್ಲಿ ಪೂರಕವಾಗಿ ಕೆಲಸವಾಗಿ, ಬಹಳ ಹಿಂದೆ ಒತ್ತುವರಿ ಮಾಡಿರುವವರಿಗೆ ಹಕ್ಕುಪತ್ರ ಕೊಡುವ ಕಾರ್ಯ ನಡೆಯಲಿದೆ ಎಂಬ ಭರವಸೆ ಇದೆ ಎಂದರು.