ಜನ್ನಾಪುರ-ಕಿರುಗುಂದ ರಸ್ತೆ ವಿಪರೀತ ಗುಂಡಿಯಾಗಿ ಮಳೆ ನೀರು ಶೇಖರಣೆಗೊಂಡಿರುವುದು.
- ಎಲ್ಲೆಂದರಲ್ಲಿ ಗುಂಡಿಬಿದ್ದು ಹಾಳಾದ ರೋಡ್‌ಗಳು
- ಮಳೆಗಾಲದ ನಂತರವಷ್ಟೇ ದುರಸ್ತಿ ಕಾರ್ಯ
ಮೂಡಿಗೆರೆ: ತಾಲೂಕಿನ ವಿವಿಧ ರಸ್ತೆಗಳು ಮಳೆಗಾಲಕ್ಕೂ ಮುನ್ನವೇ ವಿಪರೀತ ಗುಂಡಿಗಳಾಗಿವೆ. ಡಾಂಬರ್ ಮತ್ತು ಕಾಂಕ್ರೀಟ್ ರಸ್ತೆಗಳು ಗುಂಡಿಯಾಗಲು ಕಳಪೆ ಕಾಮಗಾರಿಯೇ ಕಾರಣ. ಗುಂಡಿಬಿದ್ದ ರಸ್ತೆಯಲ್ಲಿ ನಿತ್ಯ ಸಂಚರಿಸುವ ವಾಹನಗಳು ಜಖಂಗೊಳ್ಳುತ್ತಿವೆ.
ಜನ್ನಾಪುರ-ಸಕಲೇಶಪುರ ರಸ್ತೆ ಕಿರುಗುಂದ ಗ್ರಾಮದ ಗಡಿವರೆಗೆ 7 ಕಿ.ಮೀ ರಾಜ್ಯ ಹೆದ್ದಾರಿ ಸಂಪೂರ್ಣ ಗುಂಡಿಯಾಗಿದೆ. ಈ ರಸ್ತೆಯನ್ನು 2015ರಲ್ಲಿ 4.5 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ನಿರ್ವಹಣೆಯಿಲ್ಲದೆ ಅಲ್ಪ ಸಮಯದಲ್ಲೇ ವಿಪರೀತ ಗುಂಡಿಯಾಗಿ ವಾಹನ ಸಂಚಾರಕ್ಕೆ ಸಾಧ್ಯವೇ ಇಲ್ಲದೆ ವಾಹನ ಚಾಲಕರು ಅನಿವಾರ್ಯವಾಗಿ ಬೇರೆ ರಸ್ತೆಯಲ್ಲಿ ಹೋಗಬೇಕಾಗಿ ಬಂದಿತು. ಕಳೆದ ವರ್ಷ ಆಕ್ರೋಶಗೊಂಡಿದ್ದ ಸಾರ್ವಜನಿಕರ ಒತ್ತಡಕ್ಕೆ ಮಣಿದ ಪಿಡಬ್ಲುೃಡಿ ಅಧಿಕಾರಿಗಳು 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆಯ ಗುಂಡಿಯನ್ನು ಕಾಟಾಚಾರಕ್ಕೆಂಬಂತೆ ಮುಚ್ಚಿದ್ದರು. ಕಳಪೆ ಕಾಮಗಾರಿಯಾಗಿದ್ದರಿಂದ ಮುಚ್ಚಿದ್ದ ಗುಂಡಿಗಳು ಮೂರು ತಿಂಗಳಲ್ಲಿ ಮತ್ತೆ ಬಾಯ್ತೆರೆದುಕೊಂಡಿವೆ. ಸರ್ಕಾರದ 20 ಲಕ್ಷ ರೂ. ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ರಸ್ತೆ ಈಗ ವಿಪರೀತ ಗುಂಡಿಯಾಗಿ ವಾಹನ ಸಂಚರಿಸುವುದು ದುಸ್ತರವಾಗಿದೆ.
ಕಿರುಗುಂದದಿಂದ ಉದುಸೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 3 ಕಿ.ಮೀ ಜಿಪಂಗೆ ರಸ್ತೆಗೆ 1994 ಡಾಂಬರೀಕರಣ ಮಾಡಲಾಗಿತ್ತು. 32 ವರ್ಷದಲ್ಲಿ ಮತ್ತೆ ರಸ್ತೆ ಕಾಮಗಾರಿ ನಡೆದಿಲ್ಲ. ಮಧ್ಯಭಾಗದಲ್ಲಿ ಒಂದಷ್ಟು ದೂರ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಉಳಿದ 2 ಕಿ.ಮೀ ರಸ್ತೆ ಸಂಪೂರ್ಣ ಗುಂಡಿಯಾಗಿ ವಾಹನಗಳು ಸಂಚರಿಸಲು ಸಾಧ್ಯವೇ ಇಲ್ಲ ಎನ್ನುವಂತಿದೆ. ಚಕ್ಕುಡಿಗೆ-ಹೆಗ್ಗರವಳ್ಳಿ ರಸ್ತೆಗೆ 20 ವರ್ಷದ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ನಂತರ ರಸ್ತೆಯನ್ನು ಈವರೆಗೂ ಅಭಿವೃದ್ಧಿಪಡಿಸಿಲ್ಲ. ಎರಡೂ ರಸ್ತೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಗ್ರಾಮಸ್ಥರು ಅಹವಾಲು ಸಲ್ಲಿಸಿ ಸಾಕಾಗಿದೆ. ಗ್ರಾಮಸ್ಥರ ಅಹವಾಲು ಅಧಿಕಾರಿಗಳ ಕಸದ ಬುಟ್ಟಿಗೆ ಸೇರಿದೆ.
ದಾರದಹಳ್ಳಿಯಿಂದ ಕಡಿದಾಳು ಗ್ರಾಮಕ್ಕೆ ತೆರಳುವ 2 ಕಿ.ಮೀ ರಸ್ತೆ ಸಂಪೂರ್ಣ ಗುಂಡಿಯಾಗಿ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಗುಂಡಿಯಾಗಿರುವ ಈ ರಸ್ತೆಯನ್ನು ಗ್ರಾಮದ ನಿವಾಸಿಯೊಬ್ಬರು ಪತ್ನಿಯೊಂದಿಗೆ ಸೇರಿ ತಾತ್ಕಾಲಿಕವಾಗಿ ದುರಸ್ತಿಪಡಿಸಿದ್ದಾರೆ. ಜಲ್ಲಿಕಲ್ಲು ಮತ್ತು ಎಂ.ಸ್ಯಾಂಡ್‌ಗಾಗಿ 2 ಲಕ್ಷ ರೂ. ವ್ಯಯಿಸಿದ್ದಾರೆ. ಪಟ್ಟಣದ ಬಸ್ ನಿಲ್ದಾಣದಿಂದ ತತ್ಕೊಳ ಗ್ರಾಮಕ್ಕೆ ತೆರಳುವ ರಸ್ತೆ ಎಂಇಎಸ್ ಶಾಲೆಯವರೆಗೆ ಸಂಪೂರ್ಣ ಗುಂಡಿಯಾಗಿದೆ. ವಿಪರೀತ ವಾಹನಗಳ ಸಂಚಾರದಿಂದ ಈ ರಸ್ತೆಯಲ್ಲಿ ಸಾಗುವುದೇ ಕಷ್ಟಕರವಾಗಿದೆ. ರಸ್ತೆ ದುರಸ್ತಿ ಪಡಿಸಲು ಅಹವಾಲು ಸಲ್ಲಿಸಿದರೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಇದರಿಂದ ಬೇಸತ್ತ ಎಂಇಎಸ್ ಶಾಲೆ ಮಾಲೀಕ ಎಂ.ಎಸ್.ಹರೀಶ್ ಅವರು ಜಲ್ಲಿಕಲ್ಲು ಮತ್ತು ಎಂ.ಸ್ಯಾಂಡ್ ತರಿಸಿ ರಸ್ತೆಯ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಿದ್ದಾರೆ.
ಬಿಳಗುಳ ಗ್ರಾಮದ ಇಂದಿರಾನಗರದ ಕಾಂಕ್ರೀಟ್ ರಸ್ತೆ ಮತ್ತು ಅಂಬೇಡ್ಕರ್ ಶಾಲೆ, ಕಾಂಕ್ರೀಟ್ ರಸ್ತೆ ಸಂಪೂರ್ಣ ಗುಂಡಿಯಾಗಿವೆ. ಬಿಳಗುಳ ಗ್ರಾಮದ ಸುಶಾಂತ್‌ನಗರ ಮತ್ತು ಪಪಂಗೆ ಸೇರಿದ ಸನ್ನಿಧಿ ಬಡಾವಣೆ ರಸ್ತೆಯಲ್ಲಿ ತಿರುಗಾಡಲಾರದಷ್ಟು ಪ್ರಮಾಣದಲ್ಲಿ ರಸ್ತೆ ಗುಂಡಿಗುಳುಬಿದ್ದಿವೆ. ನಾಲ್ಕು ವರ್ಷದ ಹಿಂದೆ ಈ ಎರಡೂ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿತ್ತು. ಎರಡು ವರ್ಷ ಮಾತ್ರ ರಸ್ತೆ ಬಾಳಿಕೆ ಬಂದಿದೆ. ನಂತರ ಗುಂಡಿಯಾಗಿ ಈಗ ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿದೆ.
ಮೂಡಿಗೆರೆ ಪಟ್ಟಣದ ಹೆಸಗಲ್ ರಸ್ತೆ, ಸರ್ಕಾರಿ ಪಿಯು ಕಾಲೇಜ್ ಮತ್ತು ಪ್ರಥಮ ದರ್ಜೆ ಕಾಲೇಜ್ ರಸ್ತೆ, ಜೆ.ಎಂ.ರಸ್ತೆ, ಎಂ.ಜಿ.ರಸ್ತೆ, ಛತ್ರಮೈದಾನ ಬಡಾವಣೆ, ಆಜಾದ್ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳು ಗುಂಡಿಯಾಗಿವೆ. 2017ರಲ್ಲಿ ನಗರೋತ್ಥಾನದ 3.5 ಕೋಟಿ ರೂ. ಅನುದಾನ ಬಳಸಿ ಈ ರಸ್ತೆಗಳನ್ನು ಕಾಂಕ್ರಿಟೀಕರಣಗೊಳಿಸಲಾಗಿತ್ತು. ಕಳಪೆ ಕಾಮಗಾರಿಯಾಗಿದ್ದರಿಂದ ಕಾಂಕ್ರೀಟ್ ರಸ್ತೆ ಗುಂಡಿಯಾಗಿ ವಾಹನಗಳು ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಅಮೃತ ಕುಡಿಯುವ ನೀರಿನ ಯೋಜನೆಯ ಪೈಪ್ ಅಳವಡಿಸಲು ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕಾಂಕ್ರೀಟ್ ರಸ್ತೆಗಳನ್ನು ಅಗೆದು ನಾಶಪಡಿಸಿದ್ದಾರೆ. ಕೆಲ ರಸ್ತೆಗಳಿಗೆ ಕಾಂಕ್ರೀಟ್‌ನಿಂದ ತೇಪೆ ಹಾಕಿದ್ದಾರೆ. ಅವರು ಹಾಕಿರುವ ತೇಪೆ ಆರಂಭಿಕ ಸಣ್ಣ ಮಳೆಗೆ ಕೊಚ್ಚಿಕೊಂಡು ಹೋಗಿದೆ. ಪಟ್ಟಣದ ಎಲ್ಲ ರಸ್ತೆಗಳನ್ನು ಅಗೆದಿದ್ದರಿಂದ ಆ ಗುಂಡಿಗಳಲ್ಲಿ ಮಳೆ ನೀರು ಶೇಖರಣೆಗೊಂಡು ವಾಹನ ಸಂಚರಿಸುವಾಗ, ಕಾಲ್ನಡಿಗೆಯಲ್ಲಿ ಸಾಗುವವರ ಮೇಲೆ ಕೆಸರು ಮಿಶ್ರಿತ ನೀರು ಚಿಮ್ಮಿ ಅವಾಂತರ ಸೃಷ್ಟಿಸುತ್ತಿದೆ. ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಪಟ್ಟಣದ ಕಾಂಕ್ರೀಟ್ ರಸ್ತೆಗಳಲ್ಲಿ ತಿರುಗಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಪಟ್ಟಣದ ಕಾಂಕ್ರೀಟ್ ರಸ್ತೆಗಳು ವಿಪರೀತ ಗುಂಡಿಯಾಗಿದ್ದರಿಂದ ವಾಹನಗಳು ಸಂಚರಿಸಲು ಪರದಾಡುತ್ತಾರೆ. ಗುಂಡಿಗೆ ಬೈಕ್‌ಗಳು ಬಿದ್ದು ಸವಾರರು ಗಾಯಗೊಂಡಿದ್ದಾರೆ. ಅಮೃತ್ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಒಂದೂವರೆ ವರ್ಷದಿಂದ ರಸ್ತೆಯನ್ನು ಅಗೆದು ಪೈಪ್ ಅಳವಡಿಸಲಾಗಿದೆ. ಅಗೆದ ರಸ್ತೆಯನ್ನು ಈವರೆಗೂ ಮುಚ್ಚಲು ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಈಗ ಮಳೆ ಆರಂಭವಾದೊಡನೆ ಅಗೆದ ಗುಂಡಿಗಳಿಗೆ ತೇಪೆ ಹಾಕಲು ಆರಂಭಿಸಿದ್ದಾರೆ. ಇಂಥ ಕಳಪೆ ಕಾಮಗಾರಿ ನಡೆಸುತ್ತಿರುವ ಅಮೃತ್ ಕುಡಿಯುವ ನೀರಿನ ಯೋಜನೆಯ ಗುತ್ತಿಗೆದಾರರನ್ನು ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಬೇಕು. ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರ ಒತ್ತಾಯವಾಗಿದೆ.