ಕೊಪ್ಪ ತಾಲೂಕಿನ ಕುದುರೆಗುಂಡಿಯಲ್ಲಿ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು.  
ಚಿಕ್ಕಮಗಳೂರು

ಕೊಪ್ಪದ ಅಷ್ಟ ದಿಕ್ಕುಗಳ ರಸ್ತೆಗಳು ಗುಂಡಿಮಯ..!

ಪ್ರಮುಖ ಮುಖ್ಯಾಂಶಗಳು

  • ಪ್ರಮುಖ ರಸ್ತೆಗಳಲ್ಲೇ ಓಡಾಡದ ಸ್ಥಿತಿ
  • ನೆಪ ಮಾತ್ರಕ್ಕೆ ಗುಂಡಿ ಮುಚ್ಚಿರುವ ಅಧಿಕಾರಿಗಳು
ಕೊಪ್ಪ: ಮಳೆಗಾಲ ಮುಗಿಯುತ್ತಿದ್ದಂತೆ ತಾಲೂಕಿನ ಮುಖ್ಯರಸ್ತೆ, ಗ್ರಾಮೀಣ ರಸ್ತೆಗಳ ಕಾಮಗಾರಿಯ ಗುಣಮಟ್ಟ ಬಯಲಾಗಿದ್ದು, ತಾಲೂಕಿನ ಅಷ್ಟ ದಿಕ್ಕುಗಳಲ್ಲಿಯೂ ರಸ್ತೆ ಬದಲಿಗೆ ಗುಂಡಿಗಳೇ ಕಾಣುತ್ತಿದೆ.
ಕಳೆದ ವರ್ಷವೂ ತಾಲೂಕಿನ ಬಹುತೇಕ ರಸ್ತೆಗಳು ಗುಂಡಿಬಿದ್ದಿದ್ದವು. ಆಗ ನೆಪ ಮಾತ್ರಕ್ಕೆ ಮುಚ್ಚಿದ ಗುಂಡಿಗಳನ್ನು ಪರಿಣಾಮ ಈ ಬಾರಿಯ ಮಳೆಗಾಲ ಮುಗಿಯುತ್ತಿದ್ದಂತೆ ಗುಂಡಿಗಳು ಮತ್ತು ಬಾಯಿ ತೆರೆದು ವಾಹನ ಸವಾರರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕುದುರೆಗುಂಡಿ ಸೇರಿದಂತೆ ಕೆಲವೆಡೆ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬೈಕ್‌ಗಳ ಅಪಘಾತಕ್ಕೆ ಒಳಗಾಗಿದೆ. ಇನ್ನು ಲಾರಿ, ಘನ ವಾಹನಗಳು ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿವೆ.
ಕೊಪ್ಪ ಸಂಪರ್ಕಿಸುವ ಚಿಕ್ಕಮಗಳೂರು, ಶಿವಮೊಗ್ಗ, ಮೃಗವದೆ, ಮೇಲ್ಪಾಲ್ ಮುಖ್ಯರಸ್ತೆಗಳು ಸಂಪೂರ್ಣ ಗುಂಡಿ ಬಿದ್ದಿದೆ. ಕೊಪ್ಪದಿಂದ ಶಿವಮೊಗ್ಗ, ಕೊಪ್ಪದಿಂದ ಚಿಕ್ಕಮಗಳೂರಿಗೆ ವಾಹನ ಚಾಲನೆ ಅಸಾಧ್ಯ ಎನ್ನುವಷ್ಟರ ಮಟ್ಟಗೆ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಈ ಮಾರ್ಗದಲ್ಲಿ ರಸ್ತೆಯಲ್ಲಿ ಗುಂಡಿಗಳಿವೆಯೋ ಅಥಾವ ಗುಂಡಿಯಲ್ಲಿ ರಸ್ತೆ ಇದೆಯೋ ಇದೆ ಎಂಬಂತೆ ಭಾಸವಾಗುತ್ತದೆ.
ಕೊಪ್ಪ ಪಟ್ಟಣ ಹಲವು ಪ್ರವಾಸಿ ಕೇಂದ್ರಗಳಿಗೆ ಸಂಪರ್ಕ ಸಾಧಿಸುತ್ತದೆ. ಕಮಂಡಲ ಗಣಪತಿ, ಹರಿಹರಪುರ, ಪಂಚಮಿಕಲ್ಲು, ಸೀತಾವನ, ಶಕಠಪುರ, ಗೌರಿಗದ್ದೆ, ಬೊಮ್ಮಲಾಪುರಕ್ಕೆ ಸಂಪರ್ಕದ ಕೊಂಡಿಯಾಗಿದೆ. ಅದಲ್ಲದೇ ಶೃಂಗೇರಿ, ರಂಭಾಪುರಿಪೀಠ, ಬಸ್ತಿಮಠ ಸಂಪರ್ಕಕ್ಕೂ ಕೊಪ್ಪ ರಸ್ತೆಗಳು ಪ್ರಮುಖವಾಗಿವೆ. ಪ್ರವಾಸಿ ತಾಣಗಳ ಸಂಪರ್ಕ ಕೊಂಡಿಯಾಗಿರುವ ತಾಲೂಕಿನ ಪ್ರಮುಖ ರಸ್ತೆಗಳೇ ಗುಂಡಿಮಯವಾಗಿರುವುದರಿಂದ ದೂರದಿಂದ ಊರುಗಳಿಂದ ಬರುವ ಪ್ರವಾಸಿಗರು ಸ್ಥಳೀಯ ಆಡಳಿತ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ ಸಾಗುತ್ತಿದ್ದಾರೆ. ಪಟ್ಟಣದ ಮುಖ್ಯ ರಸ್ತೆಯಂತೂ ಸಂಪೂರ್ಣ ಹದಗೆಟ್ಟಿದ್ದು, ಇಲ್ಲಿನ ವಾಹನ ಚಾಲನೆ ಮಾಡುವುದಕ್ಕಿಂತ ಗುಂಡಿಗಳನ್ನು ತಪ್ಪಿಸುವುದೇ ಒಂದು ದೊಡ್ಡ ಸವಾಲು.! ಮೇಲಿನಪೇಟೆಯ ಕುವೆಂಪು ವೃತ್ತದಿಂದ ದ್ಯಾವೇಗೌಡ ವೃತ್ತದವರೆಗಿನ ರಸ್ತೆಯ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.
ರಸ್ತೆಯ ಗುಂಡಿ ಮುಚ್ಚಲು ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ವಿವಿಧ ಭಾಗದಲ್ಲಿ ಪ್ರತಿಭಟನೆ ನಡೆಸಿ ಆಡಳಿತ ಪಕ್ಷವನ್ನ ಎಚ್ಚರಿಸುವ ಕೆಲಸ ಮಾಡಿದೆ. ಆದರೆ ಅಡಳಿತ ಪಕ್ಷದ ವರ್ತನೆ ಎಮ್ಮೆ ಮೇಲೆ ಮಳೆ ಸುರಿದಂತೆ ಎನ್ನುವಂತಾಗಿದೆ. ರಸ್ತೆ ದುರಸ್ತಿಗೆ ಅನುದಾನ ಅನುದಾನ ಬಂದಿದೆ ಎಂದು ಹೇಳುತ್ತಾರೆ ಹೊರತು ರಸ್ತೆ ಅಭಿವೃದ್ಧಿ ಕಾಮಗಾರಿಗಳು ಮಾತ್ರ ಆರಂಭವಾಗಿಲ್ಲ.