ಮೂಡಿಗೆರೆ ತಾಲೂಕು ಶುಭನಗರ ಗ್ರಾಮದ ನಿವಾಸಿಗಳು ಸಾರ್ವಜನಿಕ ರಸ್ತೆಯನ್ನು ದುರಸ್ತಿಪಡಿಸಿದರು.
- ವಿಪರೀತ ಗುಂಡಿಯಾಗಿರುವ
- ಜನಪ್ರತಿನಿಧಿಗಳು
ಮೂಡಿಗೆರೆ: ಶುಭನಗರ ಗ್ರಾಮದ ಸಾರ್ವಜನಿಕ ಮುಖ್ಯ ರಸ್ತೆಯ ಅಲ್ಲಲ್ಲಿ ದೊಡ್ಡ ಗುಂಡಿಯಾಗಿ ವಾಹನ ಸಂಚಾರಕ್ಕೆ ಹಾಗೂ ಕಾಲ್ನಡಿಗೆಯಲ್ಲಿ ಸಾಗುವವರಿಗೆ ತೊಂದರೆಯಾಗಿದ್ದು, ಬೇಸತ್ತ ಗ್ರಾಮಸ್ಥರು ಸ್ವಂತ ಖರ್ಚಿನಲ್ಲಿ ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡಿದ್ದಾರೆ.
ರಸ್ತೆಯಲ್ಲಿ ವಿಪರೀತ ಗುಂಡಿಯಾಗಿರುವ ಬಗ್ಗೆ ಸ್ಥಳೀಯರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿದ್ದರು. ಜನರ ಮನವಿಯನ್ನು ಕಸದ ಬುಟ್ಟಿಗೆ ಎಸೆದಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶನಿವಾರ ಗ್ರಾಮಸ್ಥರು ರಸ್ತೆ ದುರಸ್ತಿಪಡಿಸಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು. ಗ್ರಾಮಸ್ಥರು ಸ್ವಂತ ಹಣದಿಂದ ಸಿಮೆಂಟ್, ಜೆಲ್ಲಿ, ಎಂ.ಸ್ಯಾಂಡ್ ಖರೀದಿಸಿ ತಂದು ಶ್ರಮದಾನಕ್ಕಿಳಿದರು.
ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಜನಪ್ರತಿನಿಧಿಗಳು ಮನೆ ಬಾಗಿಲಿಗೆ ಬರುವುದು ಬಿಟ್ಟರೆ ಮತ್ತೆ ಇತ್ತ ಬಂದಿಲ್ಲ. ಜಿಪಂ, ತಾಪಂ, ಗ್ರಾಪಂಗಳು ಚುನಾಯಿತ ಪ್ರತಿನಿಧಿಗಳಿಲ್ಲದೆ ಖಾಲಿ ಇವೆ. ಆಡಳಿತಾಧಿಕಾರಿಯನ್ನು ನೇಮಿಸಿದರೆ ಪ್ರಯೋಜನವಿಲ್ಲ. ಆಡಳಿತಾಧಿಕಾರಿಗಳಿದ್ದಾಗ ಅಧಿಕಾರಿಗಳು ಜನರ ಬಳಿ ಸಂಯಮದಿಂದ ವರ್ತಿಸುತ್ತಿಲ್ಲ. ದುರಹಂಕಾರದಲ್ಲಿ ಮೆರೆಯುತ್ತಾರೆ. ಅಧಿಕಾರಿಗಳ ನಿರ್ಲಕ್ಷದಿಂದ ರಸ್ತೆ ದುರಸ್ತಿಪಡಿಸುತ್ತಿಲ್ಲ. ಇಂಥ ಅಧಿಕಾರಿಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ. ಅನಾರೋಗ್ಯಕ್ಕೆ ತುತ್ತಾದವರು ಆಸ್ಪತ್ರೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ಹರಸಾಹಸ ಪಡಬೇಕಾಗಿದೆ ಎಂದು ಶುಭನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಬೀದಿ ದೀಪವಿಲ್ಲದೆ ಗ್ರಾಮಸ್ಥರು ಕತ್ತಲೆಯಲ್ಲಿ ಕಾಲ ಕಳೆಯಬೇಕಾಗಿದೆ. ಗ್ರಾಮದ ಅಭಿವೃದ್ಧಿ ಕೆಲಸಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಂಪೂರ್ಣ ಮರೆತಿರುವಂತಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಶುಭನಗರದಲ್ಲಿ ಬೀದಿ ದೀಪ ಅಳವಡಿಸಬೇಕು. ರಸ್ತೆ ದುರಸ್ತಿ ಮಾಡುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳು ನಿರ್ಲಕ್ಷ ತೋರಿದರೆ ಹೋರಾಟ ರೂಪಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.