ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದಲ್ಲಿ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆ ವಿರೋಧಿಸಿ ನಡೆದ ಸಭೆಯಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿದರು. ಬಿ.ಎಸ್.ಜಯರಾಮ್, ಬಸವರಾಜ್, ರಂಜಿತ್, ಸಾಧಿಕಾ ಬಾನು, ಎಚ್.ಎನ್.ಮಹೇಶ್, ಪುನರ್ವ, ಮಂಜುನಾಥ್, ಬಿ.ಆರ್.ಯತೀಶ್ ಇತರರಿದ್ದರು. 
ಚಿಕ್ಕಮಗಳೂರು

ಪರಿಸರಸೂಕ್ಷ್ಮ ವಲಯ ಅಧಿಸೂಚನೆ ರದ್ದುಪಡಿಸಿ

ಪ್ರಮುಖ ಮುಖ್ಯಾಂಶಗಳು

  • ಜನಪ್ರತಿನಿಧಿಗಳೂ ಆಕ್ಷೇಪ ಸಲ್ಲಿಸಲಿ
  • ಮಾಜಿ ಸಚಿವ ಬಿ.ಬಿ.ನಿಂಗಯ್ಯ ಆಗ್ರಹ
 ಮೂಡಿಗೆರೆ: ಜಿಲ್ಲೆಯ 137 ಗ್ರಾಮಗಳನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ 7ನೇ ಬಾರಿ ಪರಿಸರ ಸೂಕ್ಷ್ಮಲಯ ಎಂದು ಅಧಿಸೂಚನೆ ಹೊರಡಿಸಿದೆ. 6 ಬಾರಿ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಲಾಗಿತ್ತು. ಈ ಬಾರಿ ಕೂಡ ಕೇಂದ್ರ ಸರ್ಕಾರ ಅಧಿಸೂಚನೆ ರದ್ದುಪಡಿಸಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಒತ್ತಾಯಿಸಿದರು.
ಕಸ್ತೂರಿ ರಂಗನ್ ವರದಿ ಪ್ರಕಾರ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಪಶ್ಚಿಮಘಟ್ಟದ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ 7ನೇ ಬಾರಿ ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ಬೆಟ್ಟಗೆರೆ ಗ್ರಾಮದಲ್ಲಿ ಶುಕ್ರವಾರ ನಡೆದ ಬೆಟ್ಟಗೆರೆ, ತ್ರಿಪುರ, ಬಕ್ಕಿ, ಕೋಗಿಲೆ, ಹಳಿಕೆ ಗ್ರಾಮಸ್ಥರು ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಪಶ್ಚಿಮಘಟ್ಟ ಪ್ರದೇಶದ 20668 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಸರ್ಕಾರ ಘೋಷಿಸಿರುವುದು ಸರಿಯಲ್ಲ. ವನ್ಯಮೃಗ ಮತ್ತು ಮಾನವ ಸಂಘರ್ಷ ಮಿತಿಮೀರಿದೆ. ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದರೆ ಪಶ್ಚಿಮಘಟ್ಟದ ರೈತರ ಬದುಕನ್ನು ಕಸಿದುಕೊಂಡಂತಾಗುತ್ತದೆ. ಡಾ. ಕೆ.ಕಸ್ತೂರಿ ರಂಗನ್ ಅವಧಿಯಲ್ಲಿ ಸ್ಯಾಟಲೈಟ್ ಸರ್ವೇ ನಡೆಸಿ ಬೇಕಾಬಿಟ್ಟಿಯಾಗಿ ವರದಿ ತಯಾರಿಸಿದ್ದಾರೆ. ಕೇಂದ್ರ ಸರ್ಕಾರ ಸ್ಯಾಟಲೈಟ್ ಸರ್ವೇಯನ್ನು ಕೈಬಿಟ್ಟು ಭೌತಿಕ ಸರ್ವೇ ನಡೆಸಬೇಕು ಎಂದು ಒತ್ತಾಯಿಸಿದರು. 
ಪಶ್ಚಿಮಘಟ್ಟ ಪ್ರದೇಶದ ಶಾಸಕರು, ಸಂಸದರು ಸದನದಲ್ಲಿ ಗಂಭೀರ ಚರ್ಚೆ ನಡೆಸಬೇಕು. ಪರಿಸರ ಸೂಕ್ಷ್ಮ ವಲಯ ಎಂದು ಹೊರಡಿಸಿದಿರುವ ಅಧಿಸೂಚನೆಗೆ ಆಕ್ಷೇಪ ಸಲ್ಲಿಸಲು 45 ದಿನ ಅವಕಾಶವಿದೆ. ಜನ ಪ್ರಬಲ ಆಕ್ಷೇಪ ಸಲ್ಲಿಸುವ ಮೂಲಕ ಕರಡು ಅಧಿಸೂಚನೆ ತಿರಸ್ಕರಿಸಬೇಕು. ಇದಕ್ಕಾಗಿ ದೊಡ್ಡ ಮಟ್ಟದ ಹೋರಾಟ ನಡೆಯಬೇಕಾಗಿದೆ ಎಂದು ತಿಳಿಸಿದರು. 
ಉಪವಲಯ ಅರಣ್ಯಾಧಿಕಾರಿ ಬಸವರಾಜ್ ಮಾತನಾಡಿ, ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆಯಾಗಿರುವುದು ಅರಣ್ಯ ಇಲಾಖೆಯಿಂದಲ್ಲ. ಕೇಂದ್ರ ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಯಿಂದ. ಈ ಅಧಿಸೂಚನೆ ಮೂಡಿಗೆರೆ ಮತ್ತು ಕಳಸ ತಾಲೂಕಿನ 26 ಗ್ರಾಮಗಳ ವ್ಯಾಪ್ತಿ ಹೊಂದಿದೆ. ಬಫರ್ ಜೋನ್ ಅಧಿಸೂಚನೆ ವ್ಯಾಪ್ತಿಯಲ್ಲಿ 20 ಚದರ ಅಡಿ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಹೊಸದಾಗಿ ಬಡಾವಣೆ ನಿರ್ಮಾಣ, ಗಣಿಗಾರಿಕೆ ಸೇರಿದಂತೆ ರಾಸಾಯನಿಕ ಬಳಕೆಗೆ ಅವಕಾಶವಿಲ್ಲ ಎಂದು ತಿಳಿಸಿದರು. 
ಉಪವಲಯ ಅರಣ್ಯಾಧಿಕಾರಿ ರಂಜಿತ್ ಮಾತನಾಡಿ, ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ 14 ಸಾವಿರ ಎಕರೆ, ಸಾರಗೋಡು ವ್ಯಾಪ್ತಿಯಲ್ಲಿ 10 ಸಾವಿರ ಎಕರೆ ಮೀಸಲು ಅರಣ್ಯವಿದೆ. ಸಾರಗೋಡು ಮೀಸಲು ಅರಣ್ಯದಲ್ಲಿ 5 ಹುಲಿ, 300 ಕಾಡುಕೋಣಗಳಿವೆ. ಕಾಡಾನೆಗಳು ಕೂಡ ಹೆಚ್ಚಾಗಿವೆ. ವನ್ಯಮೃಗಗಳು ಪರಿಸರಕ್ಕೆ ಸಮತೋಲನವಾಗಿ ಜೀವಿಸುತ್ತಿವೆ. ಕಾಡಾನೆ, ಕಾಡುಕೋಣ ಇತರ ಕಾಡುಪ್ರಾಣಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಲು ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು. ಸರ್ಕಾರದಿಂದ ಆದೇಶ ಬಂದ ಕೂಡಲೆ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.
ಬೆಟ್ಟಗೆರೆ ಮತ್ತು ತ್ರಿಪುರ ಗ್ರಾಪಂ ಆಡಳಿತಾಧಿಕಾರಿ ಸಾಧಿಕಾ ಬಾನು, ಪಿಡಿಒಗಳಾದ ಪುನರ್ವ, ಎಚ್.ಎನ್.ಮಹೇಶ್, ಕಂದಾಯ ಇಲಾಖೆ ಅಧಿಕಾರಿ ಮಂಜುನಾಥ್, ಜಿಪಂ ಮಾಜಿ ಸದಸ್ಯರಾದ ಬಿ.ಆರ್.ಸುಬ್ಬಯ್ಯ, ನಿಖಿಲ್ ಚಕ್ರವರ್ತಿ, ಗ್ರಾಪಂ ಅಧ್ಯಕ್ಷರಾದ ಬಿ.ಆರ್.ಯತೀಶ್, ದಿನೇಶ್, ಗ್ರಾಮಸ್ಥರಾದ ಬಿ.ಎಂ.ಶಂಕರ್, ಉಪೇಂದ್ರ ಗೌಡ, ಮನೋಜ್, ವಸಂತ, ಅಶ್ವತ್ಥ್, ಪುನೀತ್ ಇತರರಿದ್ದರು.