ಎನ್.ಆರ್.ಪುರದಲ್ಲಿ ಏರ್ಪಡಿಸಿದ್ದ ಬಿಜೆಪಿ ಮಹಾಶಕ್ತಿ ಕೇಂದ್ರ ಹಾಗೂ ಮತಪಟ್ಟಿ ಪರಿಷ್ಕರಣೆ ಮಾಹಿತಿ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಡಿ.ಎನ್.ಜೀವರಾಜ್, ಕನಕರಾಜು ಅರಸು, ವಿ.ನೀಲೇಶ್, ಚೈತ್ರಶ್ರೀ, ರಶ್ಮಿ ಇತರರಿದ್ದರು.
- ಅನರ್ಹರನ್ನಷ್ಟೇ ತೆಗೆದುಹಾಕುವ ಉದ್ದೇಶ
- ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ
ಎನ್.ಆರ್.ಪುರ: ಮತಪಟ್ಟಿ ಪರಿಷ್ಕರಣೆ ಸರಿಯಾದ ರೀತಿಯಲ್ಲಿ ನಡೆದರೆ ಜಿಲ್ಲೆಯಲ್ಲಿ 14 ಲಕ್ಷ ಮತಗಳು ವಿಮರ್ಶೆಗೆ ಒಳಪಡಬೇಕಾಗುತ್ತವೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅಗ್ರಹಾರದ ಉಮಾಮಹೇಶ್ವರ ಸಭಾಭವನದಲ್ಲಿ ಬಿಜೆಪಿ ಹೋಬಳಿ ಘಟಕ ಶುಕ್ರವಾರ ಏರ್ಪಡಿಸಿದ್ದ ಮಹಾ ಶಕ್ತಿ ಕೇಂದ್ರ ಹಾಗೂ ಮತಪಟ್ಟಿ ಪರಿಷ್ಕರಣೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತಪಟ್ಟಿ ಪರಿಷ್ಕರಣೆಯಲ್ಲಿ ಕಾಂಗ್ರೆಸ್‌ನ ಮತಗಳನ್ನು ಡಿಲೀಟ್ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಸಂಶಯ ವ್ಯಕ್ತಪಡಿಸುತ್ತಿದೆ. ಆದರೆ ದೇಶದಲ್ಲಿ ವಿದೇಶಿಯರನ್ನು ಗುರುತಿಸಿ ಅಂಥವರನ್ನು ಮಾತ್ರ ಮತಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ ಎಂದರು.
ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಮತಪಟ್ಟಿ ಪರಿಷ್ಕ್ಕರಣೆ ಬಿಜೆಪಿ ಕಾರ್ಯಕ್ರಮವಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗಲೇ 11 ಬಾರಿ ಮತಪಟ್ಟಿ ಪರಿಷ್ಕರಣೆ ಆಗಿದೆ. ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಾಗ ಮತಪಟ್ಟಿ ಸರಿಯಾಗಿ ಇದೆ ಎನ್ನುತ್ತದೆ. ಸೋತರೆ ಮತಗಳ್ಳತನ ನಡೆದಿದೆ ಎಂದು ಆರೋಪಿಸುತ್ತದೆ. ಪಶ್ಚಿಮ ಬಂಗಾಳದಲ್ಲಿ ಸೋತ ತಕ್ಷಣ ಮತಪಟ್ಟಿ ಸರಿಯಲ್ಲ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಮುಂದಕ್ಕೆ ಹಾಕುತ್ತ ಬಂದಿತ್ತು. ಈಗ ಕೋರ್ಟ್ ಆದೇಶ ಮಾಡಿರುವುದರಿಂದ ಅಕ್ಟೋಬರ್ ವೇಳೆಗೆ ಚುನಾವಣೆ ನಡೆಸಲೇಬೇಕಾಗುತ್ತದೆ. ಆದ್ದರಿಂದ ಪ್ರತಿ ಮತಗಟ್ಟೆಯಲ್ಲೂ ಬಿಜೆಪಿ ಕಾರ್ಯಕರ್ತರು ಗಮನ ನೀಡಬೇಕು. ಒಂದೊಂದು ಮತವೂ ಅಮೂಲ್ಯ. ಮತಪಟ್ಟಿ ಪರಿಷ್ಕ್ಕರಣೆಯಿಂದ ಕೇವಲ ಸಂಸತ್, ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಗ್ರಾಪಂ ಚುನಾವಣೆ ಮೇಲೂ ಪರಿಣಾಮ ಬೀರಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಸ್‌ಐಆರ್ ಅನ್ನು ಗಂಭೀರವಾಗಿ ತೆಗೆದುಕೊಂಡಿದೆ. ಪ್ರತಿ ಬಿಜೆಪಿ ಕಾರ್ಯಕರ್ತರೂ ಎಸ್‌ಐಆರ್ ಅನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮತಪಟ್ಟಿಯಿಂದ ಅರ್ಹರು ಯಾರೂ ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರುಣಕುಮಾರ್ ಮಾತನಾಡಿ, 2002ರಲ್ಲಿ ಮತ ಪರಿಷ್ಕರಣೆ ನಡೆದಿತ್ತು. ಅನರ್ಹ ಮತದಾರರು ಮತಪಟ್ಟಿಯಲ್ಲಿ ಇರಬಾರದು ಎಂಬುದೇ ಇದರ ಉದ್ದೇಶ ಎಂದರು.
ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರುತ್ತಿಲ್ಲ. 14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಗರ್ಭಕೋಶದ ಕ್ಯಾನ್ಸರ್ ಬಾರದಂತೆ ಮುಂತಾಗ್ರತಾ ಕ್ರಮವಾಗಿ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ 4,500 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಆದರೆ ಚಿಕ್ಕಮಗಳೂರಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೋದಿ ಫೋಟೋ ಹಾಕಿರಲಿಲ್ಲ. ಉದ್ಘಾಟನೆಗೆ ಸಂಸದನಾದ ನನ್ನನ್ನೂ ಆಹ್ವಾನಿಸಲಿಲ್ಲ. ಅಪಘಾತವಾದರೆ ಚಿಕಿತ್ಸೆಗಾಗಿ 1.50 ಲಕ್ಷ ರೂ. ನೀಡುವ ಕೇಂದ್ರದ ರಾಹುತ್ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯ ಸರ್ಕಾರವು ನನ್ನ ಕಾರ್ಯಕ್ರಮ ಎಂಬಂತೆ ಬಿಂಬಿಸುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ಚಿಕ್ಕಮಗಳೂರು-ಬಾಳೆಹೊನ್ನೂರು ರಸ್ತೆಗಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ 110 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಜಿಲ್ಲೆಯಲ್ಲಿ 212 ಬಿಎಸ್‌ಎನ್‌ಎಲ್ ಟವರ್ ಇದ್ದವು. ಇದನ್ನು 420ಕ್ಕೆ ಹೆಚ್ಚಿಸಿದ್ದೇವೆ. ಹೊಸದಾಗಿ 150 ಟವರ್ ಮಂಜೂರು ಮಾಡಿದ್ದೇನೆ. ರಾಜ್ಯಕ್ಕೆ ಬಿಎಸ್‌ಎನ್‌ಎಲ್ ಟವರ್‌ಗಾಗಿ 65 ಬ್ಯಾಟರಿ ಬಂದಿದ್ದು, ಇದರಲ್ಲಿ 50 ಬ್ಯಾಟರಿ ಚಿಕ್ಕಮಗಳೂರು ಜಿಲ್ಲೆಗೆ ನೀಡಿದ್ದೇನೆ. ಬಿಎಸ್‌ಎನ್‌ಎಲ್ ಸೇವೆ ಸುಧಾರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಬಿಜೆಪಿ ಹೋಬಳಿ ಅಧ್ಯಕ್ಷ ಎಚ್.ಡಿ.ಲೋಕೇಶ್, ಎಸ್‌ಐಆರ್ ಕ್ಷೇತ್ರ ಉಸ್ತುವಾರಿ ಕನಕರಾಜು ಅರಸು, ಕ್ಷೇತ್ರ ಉಸ್ತುವಾರಿ ಚೈತ್ರಶ್ರೀ, ತಾಲೂಕು ಬಿಜೆಪಿ ಅಧ್ಯಕ್ಷ ವಿ.ನೀಲೇಶ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ದಯಾನಂದ್, ಹೋಬಳಿ ಪ್ರಧಾನ ಕಾರ್ಯದರ್ಶಿ ಎ.ಬಿ.ಮಂಜುನಾಥ್, ತಾಲೂಕು ಪ್ರಧಾನ ಕಾರ್ಯದರ್ಶಿ ಕೆಸವಿ ಮಂಜುನಾಥ್ ಇದ್ದರು.