ಶಾಲಾ ಮಕ್ಕಳಿಗೆ ವಿತರಿಸುತ್ತಿರುವ ಮೊಟ್ಟೆ ದರ ಪರಿಷ್ಕರಿಸಬೇಕು ಎಂದು ಒತ್ತಾಯಿಸಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಇಒಗೆ ಮನವಿ ಸಲ್ಲಿಸಿದರು.
ತರೀಕೆರೆ: ಪಿಎಂ ಪೋಷಣ್ ಕಾರ್ಯಕ್ರಮದಡಿ ಶಾಲಾ ಮಕ್ಕಳಿಗೆ ವಿತರಿಸುತ್ತಿರುವ ಮೊಟ್ಟೆ ದರ ಪರಿಷ್ಕರಿಸಬೇಕು ಎಂದು ಒತ್ತಾಯಿಸಿ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಇಒ ಡಾ.ಆರ್.ದೇವೇಂದ್ರಪ್ಪ ಹಾಗೂ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಕೆ.ವಿಜಯಕುಮಾರ್‌ಗೆ ಮನವಿ ಸಲ್ಲಿಸಿದರು.
ಸಿ.ಆರ್.ಅನಂತಪ್ಪ ಮಾತನಾಡಿ, ಶಿಕ್ಷಣ ಇಲಾಖೆ ಮಕ್ಕಳಿಗೆ ಮೊಟ್ಟೆ ಖರೀದಿಸಿ ವಿತರಿಸಲು ನೀಡುತ್ತಿರುವ ದರ ಕಡಿಮೆಯಾಗಿದೆ. ಪ್ರಸಕ್ತ ಮೊಟ್ಟೆ ದರದಲ್ಲಿ ಏರಿಕೆಯಾಗಿದ್ದು, ಆಯಾ ಮುಖ್ಯ ಶಿಕ್ಷಕರೇ ಪ್ರತಿ ಮೊಟ್ಟೆ ಖರೀದಿಗೆ 2 ರೂ.ಹೆಚ್ಚುವರಿಯಾಗಿ ಭರಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದರು.
ಇಲಾಖೆ ಸಮಸ್ಯೆ ಅವಲೋಕಿಸಿ ತಕ್ಷಣ ಪ್ರಸ್ತುತ ಮೊಟ್ಟೆ ಖರೀದಿಗೆ ನೀಡುತ್ತಿರುವ ದರ ಪರಿಷ್ಕರಿಸಬೇಕು. ಈ ಮೂಲಕ ಮುಖ್ಯಶಿಕ್ಷಕರಿಗೆ ಹೊರೆ ತಪ್ಪಿಸಬೇಕು. ಖರೀದಿ ಜವಾಬ್ದಾರಿಯಿಂದ ಶಿಕ್ಷಕರನ್ನು ವಿಮುಖಗೊಳಿಸಿ ಟೆಂಡರ್ ಮೂಲಕ ಮೊಟ್ಟೆ ಸರಬರಾಜು ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಸ್.ಟಿ.ತಿಪ್ಪೇಶಪ್ಪ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಸ್.ಬಸವರಾಜಪ್ಪ, ಉಪಾಧ್ಯಕ್ಷ ಎಸ್.ಧರಣೇಶ್, ಖಜಾಂಚಿಗಳಾದ ಎಲ್.ಚೇತನ್‌ಗೌಡ, ಹರೀಶ್, ಬಸವರಾಜಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಮಹೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮತ್ತಿತರರಿದ್ದರು.