-ಶೃಂಗೇರಿ ತಾಲೂಕಿನ ನೆಮ್ಮಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಮಾನವ ಹಕ್ಕುಗಳು ಮತ್ತು ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನು ನ್ಯಾಯಾಧೀಶ ಜೀತು ಉದ್ಘಾಟಿಸಿದರು. ಮಹೇಶ್, ವಿ.ಆರ್.ನಟಶೇಖರ್,ಎಸ್.ಜಿ.ಶ್ರೀನಾಥ್ ಇದ್ದರು.
ಶೃಂಗೇರಿ: ವಿಶ್ವ ಸಂಸ್ಥೆಯ ಆಶಯದಂತೆ ಪ್ರಪಂಚದಲ್ಲಿ ಜನಿಸುವ ಪ್ರತಿಯೊಬ್ಬರ ಹಕ್ಕುಗಳನ್ನು ನಿರಾಕರಿಸದೆ ಅವರ ಹಕ್ಕುಗಳನ್ನು ಗೌರವಿಸಿ ರಕ್ಷಿಸಬೇಕು ಎಂದು ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಜೆಎಂಎ್ಸಿ ನ್ಯಾಯಾಧೀಶ ಮತ್ತು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಆರ್.ಎಸ್.ಜೀತು ಹೇಳಿದರು.
ನೆಮ್ಮಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳು ಮತ್ತು ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನದ ಅಂಗವಾಗಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ಸಂವಿಧಾನವು ಎಲ್ಲ ನಾಗರಿಕರಿಗೆ ಮೂಲ ಹಕ್ಕುಗಳನ್ನು ನೀಡಿದ್ದು ಅದರೊಂದಿಗೆ ಕರ್ತವ್ಯ ಪಾಲಿಸಬೇಕು. ಕಲಿಕಾ ಹಂತದಲ್ಲಿಯೆ ವಿದ್ಯಾರ್ಥಿಗಳು ತನಗಿರುವ ಹಕ್ಕು ಮತ್ತು ಕರ್ತವ್ಯವನ್ನು ಅರಿತರೆ ಮಾತ್ರ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.
ವಕೀಲ ವಿ.ಆರ್.ನಟಶೇಖರ್ ಮಾನವ ಹಕ್ಕುಗಳು ಮತ್ತು ವಿಶ್ವ ಗ್ರಾಹಕರ ಹಕ್ಕುಗಳ ಬಗ್ಗೆ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಹಕರೆ ಮಾರುಕಟ್ಟೆಯ ಮುಖ್ಯ ಅಂಗವಾಗಿದ್ದಾರೆ. ಮಾರುಕಟ್ಟೆಯನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದ್ದಾರೆ. ಗ್ರಾಹಕರು ತಾವು ಖರೀದಿಸಿದ ವಸ್ತು ಅಥವಾ ಸೇವೆಯಲ್ಲಿ ಲೋಪದೋಷಗಳಿಂದ ತೊಂದರೆ ಅನುಭವಿಸಿದ್ದರೆ ಸೂಕ್ತ ಪರಿಹಾರ ಪಡೆಯಲು ಗ್ರಾಹಕರ ವೇದಿಕೆ ಸ್ಥಾಪಿಸಲಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಮಹೇಶ್, ಪ್ರೌಢಶಾಲೆ ಮುಖ್ಯ ಶಿಕ್ಷಕ ಎಸ್.ಜಿ.ಶ್ರೀನಾಥ್ ಇತರರಿದ್ದರು. ರಸಪ್ರಶ್ನೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.