ಎನ್.ಆರ್.ಪುರ ತಹಸೀಲ್ದಾರ್ ಡಾ. ನೂರಲ್ ಹುದಾಗೆ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಮುಖಂಡರು ಮನವಿ ಸಲ್ಲಿಸಿದರು. ಸುರೇಶ್, ರಘು, ರವಿ ಇತರರಿದ್ದರು.
- ಆದಿ ದ್ರಾವಿಡ ಸಮಾಜ ಸೇವಾ ಸಂಘ
- ಮನವಿ ಸಲ್ಲಿಕೆ
ಎನ್.ಆರ್.ಪುರ: ಪರಿಶಿಷ್ಟ ಜಾತಿಯ ಆದಿ ಕರ್ನಾಟಕ, ಆದಿ ದ್ರಾವಿಡ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಅಧಿಕಾರಿಗಳಲ್ಲಿರುವ ಗೊಂದಲ ನಿವಾರಿಸಬೇಕು ಎಂದು ತಹಸೀಲ್ದಾರ್ ಡಾ. ನೂರಲ್ ಹುದಾ ಅವರನ್ನು ಕರ್ನಾಟಕ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಗಣೇಶ ಪ್ರಸಾದ್ ಒತ್ತಾಯಿಸಿದರು.
ಸಂಘಟನೆಯಿಂದ ತಹಸೀಲ್ದಾರ್‌ಗೆ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿ, ಆದಿ ಕರ್ನಾಟಕ, ಆದಿ ದ್ರಾವಿಡ ಸಮುದಾಯದವರು ದಕ್ಷಿಣ ಕನ್ನಡ ಜಿಲ್ಲೆಯ ಮೂಲದವರಾದರೂ ಚಿಕ್ಕಮಗಳೂರು, ಉಡುಪಿ, ಹಾಸನ, ಮಡಕೇರಿ, ಶಿವಮೊಗ್ಗ ಸೇರಿ 6 ಜಿಲ್ಲೆಗಳಲ್ಲಿ ವಾಸವಾಗಿದ್ದು ಅಂದಾಜು 5 ಸಾವಿರ ಕುಟುಂಬಗಳಿವೆ. ನಮ್ಮ ಸಮುದಾಯವರು ಏಕರೂಪದ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎಂದರು.
ಪ್ರಸ್ತುತ ಒಳ ಮೀಸಲಾತಿ ಜಾರಿಯಾಗಿರುವುದರಿಂದ ಉಪ ಜಾತಿ ನಮೂದು ಕಡ್ಡಾಯ ಮಾಡಲಾಗುತ್ತಿದೆ. ನಮಗೆ ಯಾವುದೇ ಉಪ ಜಾತಿಗಳಿಲ್ಲದೆ ಆದಿ ಕರ್ನಾಟಕ, ಆದಿ ದ್ರಾವಿಡ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದೇವೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ಕೆಲವು ತಾಲೂಕಿನ ಅಧಿಕಾರಿಗಳಲ್ಲಿ ತಿಳಿವಳಿಕೆ ಕೊರತೆಯಿಂದಾಗ ನಮ್ಮ ಸಮುದಾಯದ ಜನರಿಗೆ ಜಾತಿ ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಇದರಿಂದ ನಮ್ಮ ಜಾತಿಯವರಿಗೆ ಉದ್ಯೋಗ, ಶಿಕ್ಷಣಕ್ಕೆ ತೊಂದರೆಯಾಗಿದೆ. ನಮಗೆ ಉಪ ಜಾತಿ ಇಲ್ಲದಿದ್ದರೂ ಸರ್ಕಾರದ ವೆಬ್‌ಸೈಟ್‌ನಲ್ಲಿ ಇದ್ದಂತೆ ಪರಿಶಿಷ್ಟ ಪ್ರಮಾಣ ಪತ್ರ ಪಡೆಯಲು ಅವಕಾಶವಿದೆ. ಆದ್ದರಿಂದ ಆದಿ ದ್ರಾವಿಡ ಪ್ರವರ್ಗ ಬಿ ಪ್ರಮಾಣ ಪತ್ರ ನೀಡುವಂತೆ ಕಂದಾಯ ನಿರೀಕ್ಷಕರು, ಉಪ ತಹಸೀಲ್ದಾರ್ ಹಾಗೂ ಗ್ರಾಮ ಲೆಕ್ಕಿಗರಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಗೌರವ ಅಧ್ಯಕ್ಷ ಆರ್ಡಿಕೊಪ್ಪ ಸುರೇಶ್, ಎನ್.ಆರ್.ಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಬನ್ನೂರು ರಘು, ತಾಲೂಕು ಕಾರ್ಯದರ್ಶಿ ರವಿ ಹಾಗೂ ವಿವಿಧ ತಾಲೂಕು ಸಂಘಗಳ ಪದಾಧಿಕಾರಿಗಳು ಇದ್ದರು.