ವೈಎಸ್‌ವಿ ದತ್ತಾ 
ಚಿಕ್ಕಮಗಳೂರು

ಡಿಸಿಗೆ ಬರದ ವಾಸ್ತವ ಚಿತ್ರಣದ ವರದಿ ಸಲ್ಲಿಕೆ (drought )

 ಕಡೂರು:  ತಾಲೂಕಿನಲ್ಲಿ ಬರದ ವಾಸ್ತವ ಚಿತ್ರಣದ ಸಮಗ್ರ ವರದಿಯನ್ನು ರೈತರ ನಿಯೋಗದೊಂದಿಗೆ ಜು.29ರಂದು ಜಿಲ್ಲಾಧಿಕಾರಿಗೆ ಸಲ್ಲಿಸಿ ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಲಾಗುವುದು ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ತಿಳಿಸಿದರು.
ಹತ್ತು ದಿನಗಳಿಂದ ಕಡೂರು ಕ್ಷೇತ್ರ ವ್ಯಾಪ್ತಿಯ ಏಳು ಹೋಬಳಿಗಳ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಾಗಿದೆ. ಮಳೆ ಕೊರತೆ ಹಾಗೂ ಬೆಳೆ ಬಿತ್ತನೆ ಬಗ್ಗೆ ವರದಿ ಪಡೆಯಲಾಗಿದೆ. ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಮಯದಲ್ಲಿ ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡಿದ್ದರು ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಮಳೆಯ ಅಭಾವದ ಜತೆಗೆ ತಾಲೂಕಿನಲ್ಲಿ 1,14,303 ಟನ್ ಮೇವು ದಾಸ್ತಾನು ಇದೆ. ಪ್ರತಿ ವಾರಕ್ಕೆ 3657 ಟನ್ ಮೇವು ಅಗತ್ಯವಿದೆ ಎಂಬ ಪಶು ಇಲಾಖೆಯ ಅಂಕಿ ಅಂಶಗಳ ಮಾಹಿತಿಗೂ ಗ್ರಾಮೀಣ ಪ್ರದೇಶದಲ್ಲಿನ ವಾಸ್ತವತೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ತುರ್ತು ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ಸ್ಥಾಪಿಸಬೇಕಿದೆ ಎಂದು ತಿಳಿಸಿದರು.
ಕುಕ್ಕಸಮುದ್ರ ಕೆರೆಗೆ ಎರಡು ದಿನ ಭದ್ರಾ ನೀರು ಬಿಟ್ಟರೆ ಅಲ್ಲಿ ಅಂತರ್ಜಲ ಮಟ್ಟ ಏರುತ್ತದೆ ಎಂಬ ಅಭಿಪ್ರಾಯಗಳು ರೈತರಿಂದ ವ್ಯಕ್ತವಾಗಿದೆ. ಈ ಕುರಿತು ವಿಶ್ವೇಶ್ವರಯ್ಯ ಜಲ ನಿಗಮದ ಮುಖ್ಯ ಇಂಜಿನಿಯರ್‌ಗೆ ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರ ಕಡೂರು ತಾಲೂಕು ಬರಪೀಡಿತ ಪ್ರದೇಶ ಎಂದು ಪರಿಗಣಿಸದಿದ್ದರೆ ಸರ್ಕಾರದ ಗಮನಸೆಳೆಯಲು ಪಾದಯಾತ್ರೆಯನ್ನು ಮಾಡಲಾಗುವುದು ಎಂದರು.
 ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸಿ.ಎಚ್.ಪ್ರೇಮ್‌ಕುಮಾರ್, ಮುಖಂಡರಾದ ಬಿ.ಟಿ. ಗಂಗಾಧರನಾಯ್ಕ, ಯಳಗೊಂಡನಹಳ್ಳಿ ಈಶ್ವರಪ್ಪ, ಬೀರೂರು ಮೋಹನ್, ಹರ್ಷಿತ್, ಮಚ್ಚೇರಿ ಮಂಜು ಮತ್ತಿತರರಿದ್ದರು.