ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್
ಚಿಕ್ಕಮಗಳೂರು: ಮಲೆನಾಡಿನ ಜನರ ಬದುಕಿಗೆ ತೊಂದರೆ ಉಂಟುಮಾಡುತ್ತಿರುವ ಕರಾಳ ಅರಣ್ಯ ಕಾಯ್ದೆಗಳನ್ನು ರದ್ದುಪಡಿಸುವುದರ ಜೊತೆಗೆ, ಹಲವು ವರ್ಷಗಳಿಂದ ಭೂಮಿ ಹಾಗೂ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ರೈತರು, ಕಾರ್ಮಿಕರು, ದಲಿತರು ಹಾಗೂ ಆದಿವಾಸಿಗಳಿಗೆ ಭೂಮಿ ಮತ್ತು ವಸತಿ ಹಕ್ಕು ಖಾತ್ರಿ ಪಡಿಸಬೇಕು ಎಂದು ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್ ಆಗ್ರಹಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬAಧಿಸಿದAತೆ ೭ನೇ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು ೬೦ ದಿನಗಳ ಕಾಲಾವಕಾಶ ನೀಡಿದೆ. ಇದರಿಂದ ಮಲೆನಾಡಿನ ರೈತರಲ್ಲಿ ಆತಂಕ ಸೃಷ್ಟಿಯಾಗಿದ್ದು, ಮತ್ತೊಂದೆಡೆ ಬಹುತೇಕ ಕೃಷಿ ಕಾರ್ಮಿಕರು ಹಾಗೂ ಆದಿವಾಸಿಗಳಿಗೆ ಈ ಕುರಿತು ಸೂಕ್ತ ಮಾಹಿತಿ ಇಲ್ಲ ಎಂದು ಹೇಳಿದರು.
ಈ ಹಿಂದೆ ಕೇಂದ್ರ ಪರಿಸರ ಇಲಾಖೆ ೫ನೇ ಹಾಗೂ ೬ನೇ ಕರಡು ಅಧಿಸೂಚನೆಗಳನ್ನು ಹೊರಡಿಸಿದ ಸಂದರ್ಭದಲ್ಲಿಯೂ ಕರ್ನಾಟಕ ಸರ್ಕಾರಗಳು ವರದಿಯನ್ನು ತಿರಸ್ಕರಿಸಿದ್ದವು. ಮಲೆನಾಡಿನ ಜನರು ಸಹ ಆಕ್ಷೇಪಣೆ ಸಲ್ಲಿಸಿದ್ದರು. ಆದರೂ ಪದೇಪದೇ ಅಧಿಸೂಚನೆಗಳನ್ನು ಹೊರಡಿಸುವ ಮೂಲಕ ಜನರಲ್ಲಿ ಆತಂಕ ಮೂಡಿಸಲಾಗುತ್ತಿದೆ ಎಂದು ಆರೋಪಿಸಿದರು.
ಕಸ್ತೂರಿ ರಂಗನ್ ವರದಿ ವಿಚಾರವಾಗಿ ಕರ್ನಾಟಕ ಸರ್ಕಾರ ವಿಶೇಷ ಅಧಿವೇಶನ ಕರೆದು ಚರ್ಚಿಸಲು ನಿರ್ಧರಿಸಿರುವುದನ್ನು ಹಾಗೂ ಮುಖ್ಯಮಂತ್ರಿ ಮಲೆನಾಡಿನ ಜನರೊಂದಿಗೆ ಸಂವಾದ ನಡೆಸಲು ಜಿಲ್ಲೆಗೆ ಆಗಮಿಸುತ್ತಿರುವುದನ್ನು ಕರ್ನಾಟಕ ಜನಶಕ್ತಿ ಸ್ವಾಗತಿಸುತ್ತದೆ ಎಂದರು.
ಕಸ್ತೂರಿ ರಂಗನ್ ವರದಿ ಜಾರಿ ಮಾಡುವುದಾಗಿ ಕೇಂದ್ರ ಸರ್ಕಾರ ರಾಷ್ಟಿçÃಯ ಹಸಿರು ನ್ಯಾಯಮಂಡಳಿಗೆ ಪ್ರಮಾಣಪತ್ರ ಸಲ್ಲಿಸಿರುವುದಾಗಿ ಹೇಳಲಾಗುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಈ ಪ್ರಮಾಣಪತ್ರವನ್ನು ಹಿಂಪಡೆಯುವAತೆ ಕೇಂದ್ರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿದರು.
ಪಶ್ಚಿಮಘಟ್ಟ ವ್ಯಾಪ್ತಿಯ ಸಂಸದರು ಕಳೆದ ಹಲವು ವರ್ಷಗಳಿಂದ ವರದಿ ಜಾರಿ ವಿಚಾರವನ್ನು ಭಾಷಣಗಳಿಗೆ ಸೀಮಿತಗೊಳಿಸಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಪರಿಣಾಮಕಾರಿಯಾಗಿ ಒತ್ತಡ ಹೇರದಿರುವುದರಿಂದ ಮಲೆನಾಡಿನ ಜನರು ಇಂದು ಆತಂಕ ಎದುರಿಸುವಂತಾಗಿದೆ. ಸಂಸದರಿಗೆ ಅವರ ಜವಾಬ್ದಾರಿಯನ್ನು ನೆನಪಿಸಿ, ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ರಾಜ್ಯ ಸರ್ಕಾರ ಮನವರಿಕೆ ಮಾಡಬೇಕು ಎಂದರು.
ಈ ಹಿಂದೆ ಸರ್ಕಾರಗಳು ದಲಿತರಿಗೆ ಭೂಮಿ ಮಂಜೂರು ಮಾಡಿದ್ದು, ಕೆಲವರಿಗೆ ಹಕ್ಕುಪತ್ರ ದೊರೆತಿದೆ. ಆದರೆ ಇನ್ನೂ ಕೆಲವರಿಗೆ ಅರಣ್ಯ ಇಲಾಖೆಯ ಆಕ್ಷೇಪದಿಂದ ಹಕ್ಕುಪತ್ರ ನೀಡಲಾಗುತ್ತಿಲ್ಲ. ಮಂಜೂರಾದ ದಲಿತರ ಭೂಮಿಯನ್ನು ಸಂವಿಧಾನಬದ್ಧ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಪರಿಗಣಿಸಿ, ಸೆಕ್ಷನ್ ೪ರ ವ್ಯಾಪ್ತಿಯಿಂದ ಹೊರಗಿಟ್ಟು ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಲೆನಾಡಿನಲ್ಲಿ ಪರಿಸರ ಮತ್ತು ಅರಣ್ಯ ಸಂರಕ್ಷಣೆ ಅಗತ್ಯ. ಆದರೆ ನೂರಾರು ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುವ ಬಲಾಢ್ಯರ ಒತ್ತುವರಿಯನ್ನು ತೆರವುಗೊಳಿಸಬೇಕು. ಹೊಸದಾಗಿ ನಡೆಯುತ್ತಿರುವ ಒತ್ತುವರಿಯನ್ನೂ ತಡೆಯಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಟಿ.ಎಲ್. ಗಣೇಶ್, ರಾಮು ಗೌಳಿ, ಸಂದೀಪ್ ಹಾಗೂ ಸುರೇಶ್ ಉಪಸ್ಥಿತರಿದ್ದರು.