ಗೋಣಿಬೀಡು ಪಿಡಿಒ ಸಿಂಚನಾಗೆ ಇಂಚರ ಒಕ್ಕೂಟ ಮತ್ತು ವೈಭವ ಮಹಾಸಂಘದಿಂದ ಮನವಿ ಸಲ್ಲಿಸಿದರು. ಸಫಿಯಾ, ಧರ್ಮಾವತಿ, ಸತೀಶ್, ಮಮತಾ, ಗೀತಾ ಇತರರಿದ್ದರು. 
ಚಿಕ್ಕಮಗಳೂರು

ಸಾರ್ವಜನಿಕ ಶೌಚಗೃಹ ದುರಸ್ತಿಪಡಿಸಿ

ಪ್ರಮುಖ ಮುಖ್ಯಾಂಶಗಳು

  • ಇಂಚರ ಒಕ್ಕೂಟ
  • ವೈಭವ ಮಹಾಸಂಘ
ಮೂಡಿಗೆರೆ: ಗೋಣಿಬೀಡಿನಲ್ಲಿ ಗ್ರಾಪಂ ನಿರ್ಮಿಸಿರುವ ಸಾರ್ವಜನಿಕ ಶೌಚಗೃಹ ದುರಸ್ತಿಪಡಿಸಿ ನಿರ್ವಹಣೆಗೆ ಕಾರ್ಮಿಕರನ್ನು ನೇಮಿಸಬೇಕು ಎಂದು ಪಿಡಿಒ ಸಿಂಚನಾ ಅವರನ್ನು ವೈಭವ ಮಹಾಸಂಘದ ಅಧ್ಯಕ್ಷೆ ಸಫಿಯಾ ಒತ್ತಾಯಿಸಿದರು.
ತಾಲೂಕು ಇಂಚರ ಒಕ್ಕೂಟ ಮತ್ತು ವೈಭವ ಮಹಾಸಂಘದಿಂದ ಗುರುವಾರ ಗೋಣಿಬೀಡು ಪಿಡಿಒ ಸಿಂಚನಾ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಗ್ರಾಪಂನಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಗೃಹ ನಿರ್ಮಿಸಲಾಗಿದೆ. ಅದನ್ನು ಈ ಹಿಂದೆ ಸ್ಥಳೀಯ ಹೋಟೆಲ್ ಮಾಲೀಕರೊಬ್ಬರು ಕಾರ್ಮಿಕರನ್ನು ಬಿಟ್ಟು ಸ್ವಚ್ಛಗೊಳಿಸುತ್ತಿದ್ದರು. ಸ್ವಚ್ಛಗೊಳಿಸದೆ ಹಲವು ತಿಂಗಳು ಕಳೆದಿರುವ ಕಾರಣ ಪಟ್ಟಣದಲ್ಲಿ ಜನ ತಿರುಗಾಡಲಾರದಷ್ಟು ದುರ್ವಾಸನೆ ಹರಡಿಕೊಂಡಿದೆ. ಶೌಚಗೃಹದೊಳಗೆ ಯಾರೊಬ್ಬರೂ ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.
ಮನವಿ ಸ್ವೀಕರಿಸಿದ ಸಿಂಚನಾ ಮಾತನಾಡಿ, ನಿರ್ವಹಣೆಗೆ ಕಾರ್ಮಿಕರು ಸಿಗುತ್ತಿಲ್ಲ. ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ನೀವು ಕಾರ್ಮಿಕರನ್ನು ಕಳುಹಿಸಿಕೊಟ್ಟಲ್ಲಿ ನಿರ್ವಹಣೆ ಮಾಡುತ್ತೇವೆ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಸಾರ್ವಜನಿಕ ಶೌಚಗೃಹ ನಿರ್ವಹಣೆಗೆ ಕಾರ್ಮಿಕರನ್ನು ನೇಮಿಸಲಾಗದ ಗ್ರಾಪಂ ಇದ್ದರೂ ಏನು ಪ್ರಯೋಜನವಿಲ್ಲ ಎಂದು ಸಫಿಯಾ ಆಕ್ರೋಶ ವ್ಯಕ್ತಪಡಿಸಿದರು. 
ಪಟ್ಟಣದಲ್ಲಿ ಗುರುವಾರ ಸಂತೆ ನಡೆಯುತ್ತದೆ. ಪಟ್ಟಣದಲ್ಲಿ ಸಾರ್ವಜನಿಕರಿಗೆ ಶೌಚಗೃಹವಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಕೂಡಲೆ ಶೌಚಗೃಹ ದುರಸ್ತಿಪಡಿಸಿ ನಿರ್ವಹಣೆಗೆ ಕಾರ್ಮಿಕರನ್ನು ನೇಮಿಸಬೇಕು. ಸಂಘ-ಸಂಸ್ಥೆಗಳು ಶೌಚಗೃಹವನ್ನು ದುರಸ್ತಿಪಡಿಸಿ ನಿರ್ವಹಣೆ ಮಾಡಲಿ ಎಂದು ಗ್ರಾಪಂ ಅಧಿಕಾರಿಗಳು ನಿರ್ಲಕ್ಷ ವಹಿಸಿದರೆ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. 
ತಾಲೂಕು ಇಂಚರ ಒಕ್ಕೂಟದ ಅಧ್ಯಕ್ಷೆ ಧರ್ಮಾವತಿ, ಸಂಚಾಲಕ ಸತೀಶ್, ಪದಾಧಿಕಾರಿಗಳಾದ ನಸೀಮಾ, ಮಮತಾ, ಗೀತಾ, ರತಿ, ಪ್ರೇಮಾ, ದೀಪ್ತಿ, ಪಿ.ಅರ್ಪಿತಾ, ಸೃಷ್ಟಿ, ಜಮೀಲಾ ಬಾನು, ಅನಿತಾ, ಧರ್ಮಮ್ಮ, ಪಾತಿಮಾ, ಸುನೀತಾ, ರಶೀದಾ, ಸಾಹಿನಾ, ಪರ್ವೀನ್, ಝರೀನಾ, ಸುಮಿತ್ರಾ, ರಮಿಜಾ, ಚನ್ನಕೇಶವ, ಕುಮಾರ, ಯಶೋದಾ, ಲಕ್ಷ್ಮಣ, ಬಿ.ಎಂ.ಸುನಂದಾ, ಸೀನಾ ಇತರರಿದ್ದರು.