ಬಾಳೆಹೊನ್ನೂರಿನ ರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಆಯೋಜಿಸಿದ್ದ ಅಪ್ಪ ಸೇವೆ ಕಾರ್ಯಕ್ರಮಕ್ಕೆ ಬಿ.ಕಣಬೂರು ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಅರುಣೇಶ್ ಚಾಲನೆ ನೀಡಿದರು. ಎಕೆಪಿ ಕೃಷ್ಣ ಪೊದುವಾಳ್, ಆರ್.ಡಿ.ಮಹೇಂದ್ರ, ಜಗದೀಶ್ಚಂದ್ರ, ರವೀಂದ್ರಾಚಾರ್, ರುದ್ರಯ್ಯ ಇತರರಿದ್ದರು.
ಬಾಳೆಹೊನ್ನೂರು: ರೇಣುಕನಗರದ ಪ್ರಸನ್ನ ಗಣಪತಿ ದೇವಸ್ಥಾನದ ಆವರಣದಲ್ಲಿ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಆಯೋಜಿಸಿರುವ 33ನೇ ವರ್ಷದ ಅಯ್ಯಪ್ಪಸ್ವಾಮಿ ಉತ್ಸವದ ಅಂಗವಾಗಿ ಶನಿವಾರ ಶ್ರೀ ಸನ್ನಿಧಿಯಲ್ಲಿ ವಿಶೇಷ ಅಪ್ಪ ಸೇವೆ ಕಾರ್ಯಕ್ರಮ ನಡೆಯಿತು.
ಬಿ.ಕಣಬೂರು ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಅರುಣೇಶ್ ಅಪ್ಪ ಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಗುರುಸ್ವಾಮಿಗಳಾದ ಎಕೆಪಿ ಕೃಷ್ಣ ಪೊದುವಾಳ್ ಹಾಗೂ ಮೆಣಸುಕೊಡಿಗೆಯ ರುದ್ರಯ್ಯ ನೇತೃತ್ವದಲ್ಲಿ ಅಪ್ಪ ಸೇವೆಯ ಧಾರ್ಮಿಕ ವಿಧಿಗಳು ನೆರವೇರಿದವು. ಅಪ್ಪ ಸೇವೆ ಅಂಗವಾಗಿ ವಿಶೇಷವಾಗಿ ನಿರ್ಮಿಸಿದ್ದ ಮಂಡಲದಲ್ಲಿ ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿಯನ್ನು ಇರಿಸಿ ಮಾಲಾಧಾರಿಗಳು, ಗಣ್ಯರು ಪುಷ್ಪಾರ್ಚನೆ ಸಲ್ಲಿಸಿ ಮಹಾ ಮಂಗಳಾರತಿ, ಭಜನಾ ಸೇವೆ ನಡೆಸಲಾಯಿತು. ನಂತರ ಗುರುಸ್ವಾಮಿಗಳ ನೇತೃತ್ವದಲ್ಲಿ ಬೆಂಕಿಯಲ್ಲಿ ಕಾದ ಬಾಣಲೆಯಲ್ಲಿ ಎಣ್ಣೆ ಹಾಕಿ ಅಯ್ಯಪ್ಪ ಸ್ವಾಮಿಗೆ ಅತಿ ಪ್ರಿಯವಾದ ಅಪ್ಪ (ನಯ್ಯಪ್ಪ)ವನ್ನು ಬಿಡಲಾಯಿತು. ಇದು ಹದಕ್ಕೆ ಬಂದ ನಂತರ ಬಿಸಿಯಾಗಿದ್ದ ಎಣ್ಣೆಯಲ್ಲಿ ಮಾಲಾಧಾರಿ ಸ್ವಾಮಿಗಳು ಬರಿಗೈಯಿಂದ ಅಪ್ಪವನ್ನು ತೆಗೆದು ಶ್ರೀ ಸ್ವಾಮಿಯ ಸಾನ್ನಿಧ್ಯದಲ್ಲಿ ಸಮರ್ಪಿಸಿ ಸೇವೆ ಸಲ್ಲಿಸಿದರು. ಇದೇ ಪ್ರಥಮ ಬಾರಿಗೆ ರೇಣುಕನಗರದಲ್ಲಿ ನಡೆದ ಅಪ್ಪ ಸೇವೆಯ ವಿಶೇಷ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಸೇರಿದ್ದರು.
ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಆರ್.ಡಿ.ಮಹೇಂದ್ರ ಮಾತನಾಡಿ, ಅಯ್ಯಪ್ಪ ವ್ರತಾಚರಣೆಯು ಶ್ರೇಷ್ಠವಾಗಿದ್ದು ಈ ವ್ರತವನ್ನು ಮಾಡುವುದರಿಂದ ಜೀವನದಲ್ಲಿ ಪಾಪಕರ್ಮಗಳು ಕಳೆದು ಪುಣ್ಯ ಲಗಳು ಲಭಿಸಲಿವೆ. ಕಲಿಯುಗದಲ್ಲಿ ಅಯ್ಯಪ್ಪಸ್ವಾಮಿಯ ಪವಾಡಗಳು ಹಲವು ನಡೆದಿದ್ದು ಅಸಂಖ್ಯಾತ ಭಕ್ತರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಅದರಂತೆಯೇ ಅಯ್ಯಪ್ಪಸ್ವಾಮಿ ಮಾಲಾಧಾರಣೆ ನಡೆಸಿದ ಸಂದರ್ಭದಲ್ಲಿ ನಡೆಸುವ ಅಪ್ಪ ಸೇವೆಯು ವಿಶೇಷ ಪವಾಡಗಳಲ್ಲಿ ಒಂದಾಗಿದೆ ಎಂದರು.
ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್, ರುದ್ರಯ್ಯ, ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಗೌರವಾಧ್ಯಕ್ಷ ಎಂ.ಆರ್.ರವೀಂದ್ರ, ಪ್ರಧಾನ ಕಾರ್ಯದರ್ಶಿ ರವೀಂದ್ರಾಚಾರ್, ಖಜಾಂಚಿ ಬಿ.ಜಗದೀಶ್ಚಂದ್ರ, ಉಪಾಧ್ಯಕ್ಷ ನಾಗರಾಜ್ ದುರ್ಗಾಂಬ, ಸಹದೇವ್ ಸಾಗರ್, ರವಿ, ಸಹ ಕಾರ್ಯದರ್ಶಿ ಚೇತನ್ ಆಚಾರ್ಯ, ರಾಕೇಶ್, ರಮೇಶ್ ಕೋಟಿ, ಸಹ ಖಜಾಂಚಿ ಸಂದೀಪ್ ಶೆಟ್ಟಿ, ಸಂಚಾಲಕರಾದ ಎಚ್.ಆರ್.ಆನಂದ್, ಪ್ರಭಾಕರ್ ಪ್ರಣಸ್ವಿ, ಸುರೇಂದ್ರ ಕಿಣಿ, ಪ್ರಕಾಶ್ ಬನ್ನೂರು, ನಟರಾಜ್, ಮದನ್, ಮಂಜುನಾಥ್, ಸಿ.ಎಸ್.ಮಹೇಶ್ಚಂದ್ರ, ಸುಮೇಶ್, ಗಣೇಶ್ ಕಿಣಿ ಮತ್ತಿತರರಿದ್ದರು.