ಡಾ.ಕಸ್ತೂರಿ ರಂಗನ್ ವರದಿಯಿಂದ ಬಸರವಳ್ಳಿ ಗ್ರಾಪಂನನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಬಸರವಳ್ಳಿ ಗ್ರಾಮಸ್ಥರು ಶಾಸಕಿ ನಯನಾ ಮೋಟಮ್ಮಗೆ ಮನವಿ ಸಲ್ಲಿಸಿದರು. 
ಚಿಕ್ಕಮಗಳೂರು

ಪರಿಸರ ಸೂಕ್ಷ್ಮವಲಯದಿಂದ ಬಸರವಳ್ಳಿ ಕೈಬಿಡಿ

ಆಲ್ದೂರು: ಡಾ. ಕಸ್ತೂರಿ ರಂಗನ್ ವರದಿಯ ಪರಿಸರ ಸೂಕ್ಷ್ಮವಲಯ ಪಟ್ಟಿಯಿಂದ ಬಸರವಳ್ಳಿ ಗ್ರಾಮ ಪಂಚಾಯತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮಗೆ ಮನವಿ ಸಲ್ಲಿಸಿದರು.
ಪಶ್ವಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಡಾ.ಕಸ್ತೂರಿ ರಂಗನ್ ಸಮಿತಿ ಸಲ್ಲಿಸಿರುವ ವರದಿ ಅನ್ವಯ ಹೊರಡಿಸಲಾದ ಕರಡು ಅಧಿಸೂಚನೆಯಲ್ಲಿ ಬಸರವಳ್ಳಿ ಗ್ರಾಪಂಯ ಗ್ರಾಮಗಳನ್ನು ಸೇರಿಸಿರುವುದರಿಂದ ಇಲ್ಲಿನ ರೈತರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟುಮಾಡಿದೆ. ಈ ಯೋಜನೆ ಜಾರಿಯಾದಲ್ಲಿ ಗ್ರಾಮದ ಅಭಿವೃದ್ಧಿಗೆ ದೊಡ್ಡ ಹಿನ್ನಡೆಯಾಗಲಿದೆ. ತಕ್ಷಣ ಈ ಪಟ್ಟಿಯಿಂದ ಬಸರವಳ್ಳಿ ಗ್ರಾಪಂ ಕೈಬಿಡಬೇಕು ಎಂದು ಒತ್ತಾಯಿಸಿದರು.
ಬಸರವಳ್ಳಿ ಗ್ರಾಪಂ ವ್ಯಾಪ್ತಿಯ ಶೇ.90 ರಷ್ಟು ಜನ
ಕೃಷಿ ಹಾಗೂ ತೋಟಗಾರಿಕೆ ಮೇಲೆ ಅವಲಂಬಿತವಾಗಿ ಜೀವನ ನಡೆಸುತ್ತಿದ್ದಾರೆ. ಈ ಭಾಗದಲ್ಲಿ ಪರಿಸರಕ್ಕೆ ಧಕ್ಕೆಯಾಗುವಂತಹ ಯಾವುದೇ ಕೃಷಿ ಚಟುವಟಿಕೆ ನಡೆಸದೆ ಪರಿಸರ ಸ್ನೇಹಿ ಕೃಷಿ ಪದ್ದತಿ ನಡೆಸುತ್ತಿದ್ದಾರೆ. ಈ ವರದಿಯೂ ಕೇವಲ ಸ್ಯಾಟಲೈಟ್ ಉಪಗ್ರಹ ಚಿತ್ರಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದ್ದು, ವಾಸ್ತವಿಕ ಭೂ ಸ್ಥಿತಿಯನ್ನು ಪರಿಸಗಣಿಸಿಲ್ಲ. ಕೃಷಿ ತೋಟಗಳನ್ನು ಅರಣ್ಯ ಪ್ರದೇಶಗಳು ಎಂದು ತಪ್ಪಾಗಿ ಗುರುತಿಸಿರುವುದು ಇಲ್ಲಿನ ಜನರಿಗೆ ಮಾರಕವಾಗಿದೆ. ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಿರುವುದರಿಂದ ಮೂಲ ಭೂತ ಸೌಕರ್ಯ ಕೊರತೆ ಉಂಟಾಗಲಿದ್ದು, ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡು ಯುವ ಪೀಳಿಗೆ ಹಳ್ಳಿಯನ್ನು ತೊರೆದು ವಲಸೆ ಹೋಗುವ ಪರಿಸ್ಥತಿ ನಿರ್ಮಾಣವಾಗುತ್ತದೆ ಆದರಿಂದ ಬಸರವಳ್ಳಿ ಹಾಗೂ ಅದರ ವ್ಯಾಪ್ತಿಗೆ ಒಳಪಡುವ ಎಲ್ಲ ಗ್ರಾಮಗಳನ್ನು ಪರಿಸರ ಸೂಕ್ಷ್ಮವಲಯ ಪಟ್ಟಿಯಿಂದ ಸಂಪೂರ್ಣ ಕೈಬಿಡಬೇಕು ಎಂದು ಮನವಿ ಮಾಡಿದರು.
ಮಹೇಶ್ ಬೇರಣಗೋಡು, ರವಿ ಬಸರವಳ್ಳಿ, ಸಿಂಧು ಕುಮಾರ್, ಸುಪ್ರಿತ್, ದೇವ್‌ರಾಜ್, ಜಗದೀಶ್ ಮಾಗೋಡು, ರಚನ್, ತೇಜೇಶ್, ಮೋಹನ್ ಸುತ್ತಲಿನ ಗ್ರಾಮಸ್ಥರು ಇದ್ದರು.