ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದಲ್ಲಿ ಆಯೋಜಿಸಿದ್ದ ಸತ್ಸಂಗ ಮತ್ತು ಭಗವತ್ ಚಿಂತನಾ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಕಿರಣ್‌ಕುಮರ್, ಕೆ.ಸಿ.ನಾಗೇಶ್, ಗೇರುಬೈಲು ಶಂಕರಪ್ಪ, ರಮೇಶ್ ಇತರರಿದ್ದರು.
ಶೃಂಗೇರಿ: ಮನುಷ್ಯನಿಗೆ ಆತ್ಮಜ್ಞಾನದ ಅರಿವಾಗುವ ತನಕ ದುಃಖ ನಿವಾರಣೆ ಆಗುವುದಿಲ್ಲ. ಜ್ಞಾನದಿಂದ ಅಂತರಂಗದ ಸಾಮರ್ಥ್ಯ ವ್ಯಕ್ತಿಗೆ ಲಭಿಸುತ್ತದೆ. ಉತ್ತಮ ಚಾರಿತ್ರ್ಯ ಬೆಳವಣಿಗೆಗೆ ಸಂಸ್ಕೃತಿ ಹಾಗೂ ಸಂಸ್ಕಾರ ಅಗತ್ಯ ಎಂದು ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಸತ್ಸಂಗ ಮತ್ತು ಭಗವತ್ ಚಿಂತನಾ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧರ್ಮ ಹಾಗೂ ಜ್ಞಾನ ಒಂದೇ ನಾಣ್ಯದ ಎರಡು ಮುಖಗಳು. ಮನುಷ್ಯನ ಆಧ್ಯಾತ್ಮಿಕ ಬೆಳವಣಿಗೆಗೆ ಧರ್ಮ ಹಾಗೂ ಜ್ಞಾನ ಪೂರಕ. ಅಧರ್ಮದ ಹಾದಿಯಲ್ಲಿ ವ್ಯಕ್ತಿಗೆ ಶ್ರೇಯಸ್ಸು ಲಭಿಸದು. ಹಾಗಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆ ಆಧ್ಯಾತ್ಮಿಕ ಮೌಲ್ಯದ ಅರಿವು ಮೂಡಿಸಬೇಕು. ಮುನುಷ್ಯನ ಅಂತರಂಗ ಪ್ರಮುಖ. ಹೊರಗಿನ ಸೌಂದರ್ಯ ತಾತ್ಕಾಲಿಕ. ಪ್ರಪಂಚದಲ್ಲಿ ಯಾವುದೇ ವಿದ್ಯೆ ಕಲಿಯಲು ಸಂಯಮ ಮತ್ತು ಸೌಹಾರ್ದ ಅಗತ್ಯ. ಶ್ರದ್ಧೆಯಿಂದ ಶಾಸಗಳ ಚಿಂತನೆ ನಡೆಸಿದಾಗ ವಿಶಾಲತೆ ಪರಿಮೂಡಲು ಸಾಧ್ಯ. ಸತ್ಸಂಗ ಮತ್ತು ಭಗವತ್ ಚಿಂತನೆಯಿಂದ ನಮ್ಮನ್ನು ನಾವು ಅರಿಯಬಹುದು ಎಂದರು.
ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಮಾತನಾಡಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಪ್ರಕೃತಿಯೇ ದೇವಾಲಯ ಎಂಬ ನಂಬಿಕೆಯಿಂದ ಜೀವನ ಸಾರ್ಥಕ್ಯಗೊಳಿಸಿದವರು. ಸಮಾಜದ ದೀನದಲಿತ, ದುರ್ಬಲರ ಸೇವೆಗಾಗಿ ಜೀವನ ಮುಡಿಪಾಗಿಟ್ಟರು. ನಿಸ್ವಾರ್ಥ ಸೇವೆಯೇ ಪೂಜೆ ಎಂಬ ಧ್ಯೇಯವಾಕ್ಯದೊಂದಿಗೆ ತಮಗಾಗಿ ಏನನ್ನೂ ಬಯಸದೆ ಸಕಲವೂ ಸರ್ವರಿಗಾಗಿ ಎಂದು ಜೀವಿಸಿದ ಮಹಾನ್ ವ್ಯಕ್ತಿತ್ವ ಅವರದಾಗಿತ್ತು ಎಂದರು.
ಮಹಾರಾಷ್ಟ್ರದ ಸಂಸ್ಕೃತ ವಿದ್ವಾಂಸ ರಾಮಚಂದ್ರಪ್ಪ, ಬೆಂಗಳೂರಿನ ಡಾ. ಮಲ್ಲಿಕಾರ್ಜುನ, ಸದಾಶಿವ ರಾವ್, ಮಹಾರಾಷ್ಟ್ರದ ಶ್ರೀ ಗುರುನಾಥ ಮಹಾರಾಜರು, ಚಿತ್ರದುರ್ಗದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಉಪಸ್ಥಿತರಿದ್ದರು.