ಕಳಸ ತಾಲೂಕಿನ ಇಡಕಣಿ ಗ್ರಾಪಂಯ ಕೋರೆ ಗ್ರಾಮದಲ್ಲಿ ಸ್ಥಳೀಯರೊಬ್ಬರು ಸಾರ್ವಜನಿಕ ನೀರಿನ ಬಾವಿಗೆ ಹೋಗುವ ಹಾದಿಗೆ ಬೇಲಿ ಹಾಕಿರುವುದನ್ನು ತೆರವುಗೊಳಿಸಲಾಯಿತು.  
ಚಿಕ್ಕಮಗಳೂರು

ಬಾವಿಯ ದಾರಿಗೆ ಕಟ್ಟಿದ ಬೇಲಿ ತೆರವು

ಕಳಸ: ಸ್ಥಳೀಯರೊಬ್ಬರು ಸಾರ್ವಜನಿಕ ಕುಡಿಯುವ ನೀರಿನ ಬಾವಿಗೆ ಹೋಗುವ ಹಾದಿಗೆ ಬೇಲಿ ಹಾಕಿ ನೀರು ಸರಬರಾಜಿಗೆ ಅಡ್ಡಿಪಡಿಸಿದ ಘಟನೆ ಖಂಡಿಸಿ ಇಡಕಣಿ ಗ್ರಾಪಂ ವ್ಯಾಪ್ತಿಯ ಕೋರೆ ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೋರೆ ಮತ್ತು ಹಿರೇಬೈಲು ಗ್ರಾಮಗಳ ವ್ಯಾಪ್ತಿಯ ಸಾರ್ವಜನಿಕರಿಗೆ 60 ವರ್ಷಗಳಿಂದ ಬಾವಿಯಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಇದು ಗ್ರಾಮಸ್ಥರಿಗೆ ಆಸರೆಯಾಗಿದೆ. ಇತ್ತೀಚೆಗೆ ಸ್ಥಳೀಯರೊಬ್ಬರು ಬಾವಿ ಇರುವ ಜಾಗಕ್ಕೆ ಹೋಗುವ ದಾರಿಗೆ ಅಕ್ರಮವಾಗಿ ಬೇಲಿ ನಿರ್ಮಿಸಿದ್ದಾರೆ. ಬೇಲಿ ಹಾಕಿದ ಪರಿಣಾಮ ಪಂಚಾಯಿತಿಯ ನೀರುಗಂಟಿಗೆ ಬಾವಿಯ ಬಳಿ ಹೋಗಲು ಸಾಧ್ಯವಾಗದೆ, 10 ದಿನಗಳಿಂದ ಗ್ರಾಮಕ್ಕೆ ನೀರು ಸರಬರಾಜು ಸ್ಥಗಿತಗೊಂಡಿತ್ತು. ಇದರಿಂದ ಗ್ರಾಮಸ್ಥರು ಹನಿ ನೀರಿಗೂ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ನೀರಿನ ಸಮಸ್ಯೆಯಿಂದ ಬೇಸತ್ತ ಗ್ರಾಮಸ್ಥರು ಈ ಹಿಂದೆ ಪಂಚಾಯಿತಿಗೆ ಮನವಿ ಸಲ್ಲಿಸಿ ಬೇಲಿ ತೆರವುಗೊಳಿಸುವಂತೆ ಆಗ್ರಹಿಸಿದ್ದರು. ಆದರೆ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೋಸಿಹೋದ 50ಕ್ಕೂ ಹೆಚ್ಚು ಗ್ರಾಮಸ್ಥರು ಒಟ್ಟಾಗಿ ಬಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಹತ್ತಾರು ವರ್ಷಗಳಿಂದ ಪಂಚಾಯಿತಿಯೇ ನಿರ್ಮಿಸಿ, ನಿರ್ವಹಿಸುತ್ತಿರುವ ಬಾವಿ ಇದು. ಯಾರೋ ಒಬ್ಬರು ಬೇಲಿ ಹಾಕಿದರೆ ಪಂಚಾಯಿತಿ ಮೂಕಪ್ರೇಕ್ಷಕನಾಗಿ ನಿಂತಿರುವುದು ಸರಿಯೇ? ನಮಗೆ ತಕ್ಷಣ ಕುಡಿಯುವ ನೀರು ಕೊಡಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಕಳಸ ಪೊಲೀಸರು ಪಂಚಾಯಿತಿ ಕಚೇರಿಗೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಪೊಲೀಸ್ ಇಲಾಖೆ, ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಮಾತುಕತೆ ನಡೆಯಿತು.
 ಸಾರ್ವಜನಿಕರ ಹಿತದೃಷ್ಟಿಯಿಂದ, ಗ್ರಾಪಂ ಮುಂದಾಳತ್ವದಲ್ಲೇ ಸ್ಥಳದಲ್ಲಿದ್ದ ಅಕ್ರಮ ಬೇಲಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು. ಇದರೊಂದಿಗೆ 10 ದಿನಗಳಿಂದ ಉದ್ಭವಿಸಿದ್ದ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಂತಾಗಿದೆ. ಗ್ರಾಮದ ಪ್ರಮುಖರಾದ ಜಗದೀಶ್ ಭಂಡಾರಿ, ಚಂದ್ರು, ಶರೀಫ್, ನಾಗೇಶ, ದಾಮೋಧರ, ಜ್ಯೋತಿ, ರವಿ ಇತರರಿದ್ದರು.