ಗೋರಿಗುಡ್ಡದ ಮಣ್ಣು ಜರಿದ ಸ್ಥಳವನ್ನು ಶಾಸಕ ಟಿ.ಡಿ.ರಾಜೇಗೌಡ ವೀಕ್ಷಿಸಿದರು. ನಾಗೇಶ್ ಗೊಳ್ಗೋಡು, ರಫೀಕ್, ದಿನೇಶ್, ರಮೇಶ್ ಭಟ್ ಇತರರಿದ್ದರು.  
ಚಿಕ್ಕಮಗಳೂರು

ಗೋರಿಗುಡ್ಡದ ಅಪಾಯದ ಸ್ಥಳದಿಂದ ಜನರ ಸ್ಥಳಾಂತರ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳ ಜತೆ ಸಭೆ
  • ಲೋಪ ಕಂಡಲ್ಲಿ
ಶೃಂಗೇರಿ: ಗೋರಿಗುಡ್ಡದ ತಡೆಗೋಡೆ ಬಿರುಕು ಸಂಬಂಧ ಸರ್ಕಾರ ವಿಶೇಷ ತಾಂತ್ರಿಕ ಸಮಿತಿ ರಚಿಸಿದ್ದು, ಸ್ಥಳ ಪರಿಶೀಲಿಸುತ್ತಿದೆೆ. ತಜ್ಞರ ವರದಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ತಡೆಗೋಡೆ ಕೆಳಗಡೆ ವಾಸ ಮಾಡುತ್ತಿರುವವರು ಹಾಗೂ ವ್ಯಾಪಾರಸ್ಥರನ್ನು ಸ್ಥಳಾಂತರಿಸಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಶುಕ್ರವಾರ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿ, ಮಳೆ ಹೆಚ್ಚಾಗಿ ಗೋರಿಗುಡ್ಡದ ಮಣ್ಣು ಜರಿದು ಕೆಳಗೆ ವಾಸ ಮಾಡುವವರು, ವ್ಯಾಪಾರಸ್ಥರಿಗೆ ಹಾಗೂ ಮೇಲ್ಭಾಗದಲ್ಲಿ ಇರುವ ತಾಲೂಕು ಕಚೇರಿ, ನ್ಯಾಯಾಲಯ ಕಟ್ಟಡಗಳಿಗೆ ಹಾನಿಯಾಗಬಹುದು ಎಂಬ ದೃಷ್ಟಿಯಿಂದ 1.86 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ ಎಂದರು. 
ವಿವಿಧ ಇಲಾಖೆಗಳ ಇಂಜಿನಿಯರ್ ಹಾಗೂ ತಂತ್ರಜ್ಞರಿಂದ ಮಾಹಿತಿ ಪಡೆದು ತಡೆಗೋಡೆ ನಿರ್ಮಿಸಲಾಗಿದೆ. ಕಾಮಗಾರಿಯಲ್ಲಿ ಲೋಪ ಕಂಡಲ್ಲಿ ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಪತ್ರದ ಮೂಲಕ ತಿಳಿಸಲಾಗಿದೆ. ತಡೆಗೋಡೆ ನಿರ್ಮಾಣದಲ್ಲಿ ಲೋಪಕಂಡುಬಂದಲ್ಲಿ ಅದನ್ನು ಸುಸ್ಥಿತಿಗೆ ತರುವ ಜವಾಬ್ದಾರಿ ನಮ್ಮ ಮೇಲಿದೆ. ವಿಪಕ್ಷದವರ ಪ್ರತಿಭಟನೆಯನ್ನು ಒಪ್ಪುತ್ತೇನೆ. ಆದರೆ ಇದರಲ್ಲಿ ರಾಜಕಾರಣ ಸಲ್ಲದು. ಕಾಮಾಲೆ ಇದ್ದವರ ಕಣ್ಣಿಗೆ ಎಲ್ಲವೂ ಹಳದಿ ಬಣ್ಣ ಕಾಣಿಸುತ್ತದೆ. ದೂಷಿಸುತ್ತಿರುವವರ ಸ್ಥಿತಿಯೂ ಹಾಗೇ ಆಗಿದೆ. ಅವರ ಕಾಲದಲ್ಲಿ ಮಾಡಿದಷ್ಟು ಭ್ರಷ್ಟಾಚಾರ ನಾನು ಮಾಡಿಲ್ಲ. ನಾನು ಭ್ರಷ್ಟಾಚಾರ ಮಾಡಿದ್ದರೆ ಅದನ್ನು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ಶೃಂಗೇರಿ ಭಾರತೀ ಬೀದಿಯಿಂದ ತಾಲೂಕು ಕಚೇರಿ ಹಾಗೂ ಮೆಹಬೂಬ್ ಝಹೂಷ್ ದರ್ಗಾಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಭೂಕುಸಿತ ತಡೆಗಟ್ಟಲು ನಿರ್ಮಿಸಲು ತಡೆಗೋಡೆ ಬಿರುಕು ಬಿಡಲು ಕಾರಣ ಮತ್ತು ಕೈಗೊಳ್ಳಬೇಕಾದ ತುರ್ತುಕ್ರಮ ಕುರಿತು ಅಧಿಕಾರಿಗಳ ಸಮಿತಿಯನ್ನು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ರಚಿಸಿದ್ದಾರೆ. ರಾಜ್ಯ ವಿಪತ್ತು ಉಪಶಮನನಿಧಿ ಅಡಿಯಲ್ಲಿ ಕಟ್ಟಲಾದ ಕಾಂಕ್ರೀಟ್ ತಡೆಗೋಡೆ ಕಾಮಗಾರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. ಪ್ರಸ್ತುತ ಮಳೆಯಿಂದ ತಡೆಗೋಡೆ ಬಿರುಕುಬಿಟ್ಟಿದ್ದು, ಅಧಿಕಾರಿಗಳು ವರದಿ ನೀಡಿದ್ದಾರೆ. ಅಲ್ಲಿ ಹಲವಾರು ವಾಸದ ಮನೆಗಳು ಮತ್ತು ಅಂಗಡಿ ಮಳಿಗೆಗಳು ಇವೆ. ಕಾಂಕ್ರೀಟ್ ತಡೆಗೋಡೆಯ ದೋಷಗಳು, ಬಿರುಕುಗಳಿಗೆ ಕಾರಣಗಳು ಮತ್ತು ತೆಗೆದುಕೊಳ್ಳಬೇಕಾದ ತುರ್ತು ಸುರಕ್ಷತಾ ಕ್ರಮಗಳ ಕುರಿತು ಸ್ಥಳ ತಪಾಸಣೆ ನಡೆಸಿ ಸಮಗ್ರ ವರದಿ ನೀಡಲು ಪಿಡಬ್ಲುೃಡಿ ಇಇ, ಹಾಸನ ಸಹಾಯಕ ಕಾರ್ಯಪಾಲಕ ಅಭಿಯಂತರು, ತಾಂತ್ರಿಕ ತಜ್ಞರನ್ನು ಒಳಗೊಂಡತೆ ಸಮಿತಿ ರಚಿಸಿದ್ದಾರೆ. ಎಲ್ಲವನ್ನೂ ಸೂಕ್ತವಾಗಿ ಗಮನಿಸಿ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಸಿ ಆದೇಶಿದ್ದಾರೆ.
ತಡೆಗೋಡೆ ಹಾನಿಗೊಳಗಾದ ಸ್ಥಳವನ್ನು ಶಾಸಕ ಟಿ.ಡಿ.ರಾಜೇಗೌಡ ವೀಕ್ಷಿಸಿದರು. ತಹಸೀಲ್ದಾರ್ ಅನುಪ್ ಸಂಜೋಗ್, ಇಒ ಸುದೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್, ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗಡೆ, ಮಾರನಕೊಡಿಗೆ ನಟರಾಜ್, ದಿನೇಶ್ ಶೆಟ್ಟಿ ಇದ್ದರು.