ಶೃಂಗೇರಿ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅನೂಪ್ ಸಂಜೋಗ್‌ಗೆ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ನಾಗೇಶ್, ಮಹೇಶ್, ದಿನೇಶ್, ತ್ಯಾಗರಾಜ್ ಇತರರಿದ್ದರು. 
ಚಿಕ್ಕಮಗಳೂರು

ರೈತರ ಒತ್ತುವರಿ ಭೂಮಿ ಸಕ್ರಮಗೊಳಿಸಿ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ಸುಪ್ರೀಂಕೋರ್ಟ್ ನಿರ್ದೇಶನದಂತೆ ಎಸ್‌ಪಿಟಿ ರಚಿಸಲಾಗಿದೆ
  • ಅರಣ್ಯ ಭೂಮಿ ಒತ್ತುವರಿ ಎಂದು ಪರಿಗಣಿಸಿದರೆ ರೈತ ಕುಟುಂಬಗಳು ಬೀದಿಗೆ ಬರಲಿವೆ

ಶೃಂಗೇರಿ: ತಾಲೂಕಿನಲ್ಲಿ ಕೇವಲ ಮೂರು ಗ್ರಾಮಗಳಲ್ಲಿ ಕೆಲವು ಜಾಗವನ್ನು ಮಾತ್ರ ಅರಣ್ಯ ಎಂದು ಉದ್ಘೋಷಣೆ ಮಾಡಲಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಒಳಪಟ್ಟಿರುವ ಗ್ರಾಮಗಳು ಮಾತ್ರ ಅರಣ್ಯ ಎಂದು ಉದ್ಘೋಷಿಸಲಾಗಿದೆ ಎಂದು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ತಿಳಿಸಿದರು.

ಬುಧವಾರ ತಾಲೂಕು ಕಚೇರಿಯಲ್ಲಿ ಒತ್ತುವರಿ ಸಮಸ್ಯೆ ಬಗೆಹರಿಸುವಂತೆ ಕುರಿತು ತಹಸೀಲ್ದಾರ್ ಅನೂಪ್ ಸಂಜೋಗ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಎಸ್‌ಪಿಟಿ ರಚಿಸಲಾಗಿದೆ. ಅರಣ್ಯಭೂಮಿಯನ್ನು ಖಾಸಗಿ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಸರ್ಕಾರಿ ಜಾಗ ಒತ್ತುವರಿ ನಡೆಸಿರುವ ಕುರಿತು ಮಾಹಿತಿ ನೀಡಲು ಸರ್ವೇ ಪ್ರಾರಂಭವಾಗಿದೆ ಎಂಬ ಮಾಹಿತಿ ಇದೆ. ಆದರೆ ಪ್ರಸ್ತುತ ಇರುವ ಒತ್ತುವರಿ ಜಾಗಗಳು ಪ್ರಸ್ತಾವಿತ ಅರಣ್ಯ4/1 ಆಗಿದ್ದು, ಇಲ್ಲಿರುವ ಜಾಗಗಳನ್ನು ಅರಣ್ಯಭೂಮಿ ಒತ್ತುವರಿ ಎಂದು ಪರಿಗಣಿಸಬಾರದು. ಒಂದು ವೇಳೆ ಅರಣ್ಯ ಭೂಮಿ ಒತ್ತುವರಿ ಎಂದು ಪರಿಗಣಿಸಿದರೆ ಸಾವಿರಾರು ರೈತ ಕುಟುಂಬಗಳು ಬೀದಿಗೆ ಬರಲಿವೆ. ಸರ್ಕಾರದ ಯೋಜನೆಯಡಿ ಮನೆಗಳಿಗೆ ಅರ್ಜಿ ಸಲ್ಲಿಸಿದ ಬಡವರ ಹಾಗೂ ರೈತರ ಸಾವಿರಾರು ಅರ್ಜಿಗಳು ಇತ್ಯರ್ಥವಾಗದೆ ಇರುವುದರಿಂದ ಸೆಕ್ಷನ್ 17 ಎಂದು ಉದ್ಘೋಷಿತವಾದ ಅರಣ್ಯಭೂಮಿ ಕುರಿತು ಮಾಹಿತಿ ಮಾತ್ರ ನೀಡಬೇಕು. ನಮ್ಮ ಮನವಿ ತಿರಸ್ಕರಿಸಿದಲ್ಲಿ ಹೋರಾಟ ಅನಿವಾರ್ಯ ಎಂದರು.

ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ-169 ಕಾಮಗಾರಿ ಆನೆಗುಂದದಿಂದ ರೈತಭವನದ ತನಕ ನಾಲ್ಕುಪಥ ಹೆದ್ದಾರಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಮೂರು ಕಡೆ ರಸ್ತೆ ಕಾಮಗಾರಿಯನ್ನು ಅರಣ್ಯ ಇಲಾಖೆ ಸ್ಥಗಿತಗೊಳಿಸಿದೆ. ಈ ರಸ್ತೆ 1985ರಲ್ಲಿ ರಾಜ್ಯ ಹೆದ್ದಾರಿ ಎಂದು ಘೋಷಣೆ ಆಗಿದೆ. ಹೆದ್ದಾರಿಯ ವಿಸ್ತೀರ್ಣ ರಸ್ತೆಯ ಎರಡೂ ಬದಿ ಸೇರಿದಂತೆ 80 ಮೀಟರ್ ವಿಸ್ತೀರ್ಣ ಹೊಂದಿದೆ. 1997ರಲ್ಲಿ ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದ್ದು ರಾಷ್ಟ್ರೀಯ ರೋಡ್ ಕಾಂಗ್ರೆಸ್ ನಿಯಮದಂತೆ 80 ಮೀಟರ್ ರಸ್ತೆ ಅಗಲೀಕರಣಕ್ಕೆ ಅವಕಾಶವಿದೆ. ಇಲಾಖೆ ನಿಯಮಬಾಹಿರವಾಗಿ 2008ರಲ್ಲಿ ಪ್ರಸ್ತಾವಿತ ಅರಣ್ಯ4/1 ಎಂದು ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಜಾಗವನ್ನು ಸೇರಿಸಿ ನಕ್ಷೆ ತಯಾರಿಸಿದೆ. ಕಾಮಗಾರಿ ಪ್ರಾರಂಭಿಸಲು ಮೂರು ಜಾಗಗಳಿಗೆ 1.82 ಕೋಟಿ ರೂಪಾಯಿ ಪಾವತಿಸಬೇಕು ಎಂದು ಒತ್ತಡ ತರುತ್ತಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಇಲಾಖೆ ಮೇಲಾಧಿಕಾರಿಗಳು ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ಸಮಿತಿ ಅಧ್ಯಕ್ಷ ಮನವಿ ಮಾಡಿದರು.

ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಉಪಾಧ್ಯಕ್ಷ ಎಚ್.ಎಲ್.ತ್ಯಾಗರಾಜ್, ಗೌರವಾಧ್ಯಕ್ಷ ಕಚ್ಚೋಡಿ ಶ್ರೀನಿವಾಸ್,ಪದಾಧಿಕಾರಿಗಳಾದ ದಿನೇಶ್ ಅಂಗುರ್ಡಿ, ತನಿಕೋಡು ಮಂಜುನಾಥ್ ನಾಯ್ಕ, ಸುನೀಲ್ ಸಂಪೇಕೋಳಲು ಇದ್ದರು.