ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತ ಹಿತರಕ್ಷಣಾ ವೇದಿಕೆ ಸದಸ್ಯರು ವಿಧಾನಪರಿಷತ್ ಸದಸ್ಯೆ ಆರತಿ ಕೃಷ್ಣಗೆ ಮನವಿ ಸಲ್ಲಿಸಿದರು. ಭನ್ವರ್ ಸಿಂಗ್ ಮೀನಾ, ದೀಪಕ್ ದೊಡ್ಡಯ್ಯ ಮತ್ತು ಬೆಳೆಗಾರರ ಸಂಘದ ಪದಾಧಿಕಾರಿಗಳು ಇದ್ದರು.
- ರೈತ ಹಿತರಕ್ಷಣಾ ವೇದಿಕೆ
- ಪಹಣಿಯ ಬೆಳೆ ನಮೂದು
ಬಾಳೆಹೊನ್ನೂರು: ಮೂಡಿಗೆರೆ ತಾಲೂಕಿನ ಅತ್ತಿಗೆರೆ ಗ್ರಾಮ ಹಾಗೂ ಕಡೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಅಕ್ರಮ ಸಕ್ರಮದಲ್ಲಿ ನೀಡಿದ ಸಾಗುವಳಿ ಚೀಟಿ ರದ್ದು ಮಾಡಿರುವುದನ್ನು ಮರು ಪರಿಶೀಲಿಸಿ ಸಕ್ರಮಗೊಳಿಸಲು ಅನುವು ಮಾಡುವಂತೆ ಕೋರಿ ಮೂಡಿಗೆರೆ ರೈತ ಹಿತರಕ್ಷಣಾ ವೇದಿಕೆ ಸದಸ್ಯರು ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ ಅವರಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಸುಮಾರು 8 ಸಾವಿರ ರೈತ ಕುಟುಂಬಗಳು ಅಕ್ರಮ ಸಕ್ರಮ ಾರ್ಮ್ ನಂ.50, 53ರ ಅಡಿಯಲ್ಲಿ ಅರ್ಜಿ ಸಲ್ಲಿಸಿ ಕಾನೂನುಬದ್ಧ ಸಕ್ರಮವಾಗಿ ಸಾಗುವಳಿ ಚೀಟಿ ಪಡೆದು ಜೀವನ ಸಾಗಿಸುತ್ತಿವೆ. ರಾಜಕೀಯ, ವೈಯಕ್ತಿಕ ನೆಲೆಯಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಸೃಷ್ಟಿಯಾದ ಕಾರಣ ಸಾಗುವಳಿ ಚೀಟಿ ಪಡೆದಿದ್ದನ್ನು ಹಗರಣ ಎಂಬಂತೆ ಬಿಂಬಿಸಿ ತನಿಖೆಗೆ ಆಗ್ರಹಿಸಿದ ಕಾರಣ ಸಾವಿರಾರು ಸಾಗುವಳಿ ಚೀಟಿಗಳನ್ನು ಸರ್ಕಾರ ರದ್ದು ಮಾಡಿದೆ. ಈ ಕುರಿತು ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಜಿಲ್ಲಾಧಿಕಾರಿ ಹಾಗೂ ಕಂದಾಯ ಉಪ ವಿಭಾಗಾಧಿಕಾರಿ 2024ರ ಏ.10ರಂದು ಸಾಗುವಳಿ ಚೀಟಿ ರದ್ದು ಮಾಡಿ ಹೊರಡಿಸಿದ ಆದೇಶ ಹೊರನೋಟಕ್ಕೆ ಕಾನೂನುಬಾಹಿರ ಎಂದು ನಿರ್ಣಯಿಸಿ ಸರ್ಕಾರದ ಆದೇಶಕ್ಕೆ ಏ.29ರಂದು ತಡೆಯಾಜ್ಞೆ ನೀಡಿದೆ. ಆದರೆ ಈಗಾಗಲೇ ರೈತರ ಹೆಸರಿನಲ್ಲಿದ್ದ ಪಹಣಿ ಕಾಲಂಗಳಲ್ಲಿ ಸರ್ಕಾರಿ ಎಂದು ನಮೂದಾದ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ದೊರೆಯುವ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಇದರಿಂದಾಗಿ ತುಂಬಲಾರದ ನಷ್ಟವಾಗಿದ್ದು ಜೀವನ ನಿರ್ವಹಣೆ ಕಷ್ಟವಾಗಿದೆ. ಅಧಿಕಾರಿಗಳು ಸಮಗ್ರವಾಗಿ ಪರಿಶೀಲನೆ ನಡೆಸದೆ ಬಡವರು, ದಲಿತರು, ಅಲ್ಪಸಂಖ್ಯಾತರ ಸಾಗುವಳಿ ಭೂಮಿ ರದ್ದು ಮಾಡಿದ್ದಾರೆ ಎಂದು ದೂರಿದರು.
ಸಾಗುವಳಿ ಚೀಟಿ ಹೊಂದಿದ ಕೃಷಿ ಭೂಮಿ ಮೇಲೆ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದು ವಾಪಸ್ ಕಟ್ಟಲು, ಮರು ಹೊಂದಾಣಿಕೆ ಮಾಡಲು, ಜಮೀನಿಗೆ ಬೇಕಾಗುವಷ್ಟು ರಸಗೊಬ್ಬರ ಪಡೆಯಲು ಸಾಧ್ಯವಾಗುತ್ತಿಲ್ಲ. ಮಂಜೂರು ಆಗಿರುವ ಪಹಣಿಯ ಬೆಳೆ ನಮೂದು (್ರೂಟ್ ಐಡಿ) ಆಗದಂತೆ ಉಪ ವಿಭಾಗಾಧಿಕಾರಿಗಳು ತಡೆಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಇದನ್ನು ಸರಿಪಡಿಸಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಉಚ್ಛ ನ್ಯಾಯಾಲಯದ ರಿಟ್ ಅರ್ಜಿ ತೀರ್ಪಿಗೆ ಒಳಪಡುವಂತೆ ಪಹಣಿ ಕಾಲಂನಲ್ಲಿ ಖಾತೆದಾರರ ಹೆಸರು ನಮೂದು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದರು.
ರೈತರ ಸಮಸ್ಯೆಯನ್ನು ಕಂದಾಯ ಸಚಿವರ ಜತೆ ಚರ್ಚಿಸಿ ಇಲಾಖೆ ಅಧಿಕಾರಿಗಳ ಗಮನ ಸೆಳೆಯುತ್ತೇನೆ ಎಂದು ಆರತಿ ಕೃಷ್ಣ ಪ್ರತಿಕ್ರಿಯಿಸಿದರು. ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮತ್ತು ಬೆಳೆಗಾರರ ಸಂಘದ ಪದಾಧಿಕಾರಿಗಳು ಇದ್ದರು.