ತರೀಕೆರೆ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಿಂತಕ ಸುಧೀರ್ ಮರೋಳ್ಳಿ ರಾಷ್ಟ್ರಕವಿ ಕುವೆಂಪು ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಿದರು. ಟಿ.ಎಸ್.ಪ್ರಕಾಶ್ ವರ್ಮ, ಟಿ.ದಾದಾಪೀರ್, ಡಾ.ಆರ್.ದೇವೇಂದ್ರಪ್ಪ, ಬಿ.ಎಸ್.ಭಗವಾನ್, ಸುನಿತಾ ಇತರರಿದ್ದರು. 
ಚಿಕ್ಕಮಗಳೂರು

ಪ್ರಚಲಿತದಲ್ಲಿ ನಡೆಯುವ ಯುದ್ಧಗಳಿಗೆ ರಾಮಾಯಣ ದರ್ಶನಂ ಉತ್ತಮ ಪರಿಹಾರ

ಯಾವುದೇ ರಾಮಾಯಣದಲ್ಲಿ ಊರ್ಮಿಳೆಗೆ ನ್ಯಾಯ ದೊರಕಿಲ್ಲ. ಕುವೆಂಪು ತಮ್ಮ ಕಾವ್ಯದಲ್ಲಿ ಊರ್ಮಿಳೆಯ ಮನಸ್ಥಿತಿ ತೆರೆದಿಟ್ಟಿದ್ದಾರೆ. ಮಲೆನಾಡಿನ ಸೊಬಗನು ತಮ್ಮ ಕಾವ್ಯದಲ್ಲಿ ತೆರೆಡಿಡುವ ಮೂಲಕ ಕುವೆಂಪು ತಮಗಿದ್ದ ಪರಿಸರ ಪ್ರೇಮವನ್ನು ಸಾಹಿತ್ಯಾಸಕ್ತರಿಗೆ ಉಣಬಡಿಸಿದ್ದಾರೆ.ತರೀಕೆರೆ: ರಾಷ್ಟ್ರಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಮಹಾತ್ಮ ಗಾಂಧೀಜಿ ಹಾಗೂ ಅರವಿಂದ ಘೋಷರ ಪ್ರಭಾವದಿಂದ ಮೂಡಿ ಬಂದಿದೆ ಎಂದು ಚಿಂತಕ ಸುಧೀರ್ ಮರೋಳ್ಳಿ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತಿ ಸಮಿತಿ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀರಾಮಾಯಣ ದರ್ಶನಂ ಪುಸ್ತಕ ಓದು, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯ ಗೀತ ಗಾಯನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸ್ವಾತಂತ್ರತ್ಯ ಸಂಗ್ರಾಮ ಸಂದರ್ಭದ ಎಲ್ಲ ಶೋಷಣೆ ವಿರುದ್ಧದ ಹೋರಾಟವನ್ನು ರಾಮಾಯಣ ಪಾತ್ರಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದರು.

ಕುವೆಂಪು ಅವರ ರಾಮಾಯಣ ದರ್ಶನಂ 10ನೇ ಶತಮಾನದಲ್ಲಿ ಪಂಪ ರಚಿತ ಕರ್ನಾಟಕ ಭಾರತ ಕಥಾ ಮಂಜರಿ, 15ನೇ ಶತಮಾನದಲ್ಲಿ ಕುಮಾರ ಭಾರತ ನಂತರ 20ನೇ ಶತಮಾನದಲ್ಲಿ ಮೂಡಿ ಬಂದ ಮಹಾಕಾವ್ಯವಾಗಿದೆ. ರಾಮಾಯಣವನ್ನು ಜನಪದರು ತಮ್ಮ ಅನುಭವಗಳ ಮೂಲಕ ರಚಿಸಿದ್ದಾರೆ. ರಾಮ ಮನೋಹರ ಲೋಹಿಯಾ ಪ್ರಕಾರ ರಾಮಾಯಣ ಹಾಗೂ ಮಹಾಭಾರತ ಕಾವ್ಯಗಳು ನಿರಕ್ಷರಕುಕ್ಷಿಗು ಸೇರಿದ ಸಾಹಿತ್ಯವಾಗಿದೆ ಎಂದು ಹೇಳಿದರು.

ಕುವೆಂಪು ರಾಮಾಯಣದಲ್ಲಿ ಹಿಂಸೆಗೆ ಅವಕಾಶವಿಲ್ಲದೆ ಪಶ್ಚಾತ್ತಾಪಕ್ಕೆ ಅವಕಾಶ ನೀಡಲಾಗಿದೆ. ಲಂಕೆ ಜಯಿಸಿ ಸೀತೆಯನ್ನು ಮರಳಿ ಪಡೆದ ರಾಮ ಯುದ್ಧದಲ್ಲಾದ ನಷ್ಟಗಳ ಕುರಿತು ಪಶ್ಚಾತ್ತಾಪ ಪಡುವ ಜತೆಗೆ ಯುದ್ಧಗಳಿಂದ ಲಾಭವಿಲ್ಲ ಎನ್ನುವ ಅನಿಸಿಕೆಯನ್ನು ಕಾವ್ಯದಲ್ಲಿ ಬರುವ ರೈತ ಸಹ ವ್ಯಕ್ತಪಡಿಸುತ್ತಾನೆ. ರಾಮ ಮತ್ತು ರಾವಣರ ಯುದ್ಧವನ್ನು ಮುರ್ಖರ ಯುದ್ಧ ಎಂದು ಕರೆದಿದ್ದಾನೆ. ಪ್ರಚಲಿತದಲ್ಲಿ ನಡೆಯುವ ಯುದ್ಧಗಳಿಗೆ ರಾಮಾಯಣ ದರ್ಶನಂ ಉತ್ತಮ ಪರಿಹಾರ ಎಂದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ, ಶ್ರೀ ರಾಮಾಯಣ ದರ್ಶನಂ ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕಾವ್ಯ ಎನ್ನುವುದು ನಮ್ಮೆಲ್ಲರ ಹೆಗ್ಗಳಿಕೆ ಎಂದು ಹೇಳಿದರು.

ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಟಿ.ದಾದಾಪೀರ್ ಮಾತನಾಡಿ, ವಾಲ್ಮೀಕಿ ರಾಮಾಯಣದ ಮೂಲ ಆಶಯ ಇಟ್ಟು ರಚಿತವಾದ ಅನೇಕ ಕಾವ್ಯಗಳಲ್ಲಿ ಕುವೆಂಪು ರಾಮಾಯಣ ದರ್ಶನಂ ವಿಭಿನ್ನವಾಗಿದೆ. ಮಲೆನಾಡಿನ ಪರಿಸರ, ಸಮನ್ವಯತೆ, ಸಮಾನತೆ, ದೂರದೃಷ್ಟಿ ಹೊಂದಿರುವ ಮಹಾಕಾವ್ಯ ರಾಮಾಯಣ ದರ್ಶನಂ ಎಂದರು.

ಸ್ಥಳೀಯ ಗಾಯಕರಾದ ಸುನಿತಾ, ವಿಜಯಾ, ಉಮಾ, ಲತಾ, ರೋಹಿಣಿ ಕುವೆಂಪು ವಿರಚಿತ ಗೀತೆ ಹಾಡಿದರು. ತಾಪಂ ಇಒ ಡಾ.ಆರ್.ದೇವೇಂದ್ರಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಸಿ.ಆರ್.ಅನಂತಪ್ಪ, ಲೇಖಕ ಟಿ.ಎಸ್.ಮೋಹನ್‌ಕುಮಾರ್, ಪ್ರಮುಖರಾದ ಬಿ.ಎಸ್.ಭಗವಾನ್, ಮಧುಸೂದನ್, ಚೇತನ್‌ಗೌಡ, ಟಿ.ಎಸ್.ನಾಗರಾಜ್ ಮತ್ತಿತರರಿದ್ದರು.

ಯಾವುದೇ ರಾಮಾಯಣದಲ್ಲಿ ಊರ್ಮಿಳೆಗೆ ನ್ಯಾಯ ದೊರಕಿಲ್ಲ. ಕುವೆಂಪು ತಮ್ಮ ಕಾವ್ಯದಲ್ಲಿ ಊರ್ಮಿಳೆಯ ಮನಸ್ಥಿತಿ ತೆರೆದಿಟ್ಟಿದ್ದಾರೆ. ಮಲೆನಾಡಿನ ಸೊಬಗನು ತಮ್ಮ ಕಾವ್ಯದಲ್ಲಿ ತೆರೆಡಿಡುವ ಮೂಲಕ ಕುವೆಂಪು ತಮಗಿದ್ದ ಪರಿಸರ ಪ್ರೇಮವನ್ನು ಸಾಹಿತ್ಯಾಸಕ್ತರಿಗೆ ಉಣಬಡಿಸಿದ್ದಾರೆ.
ಸುಧೀರ್ ಮರೋಳ್ಳಿ ಚಿಂತಕ