ಬಾಳೆಹೊನ್ನೂರಿನ ಆಂಜನೇಯ ಸ್ವಾಮಿ ದೇವಸ್ಥಾನದ ರಾಜಗೋಪುರ ಮತ್ತು ಮಹಾದ್ವಾರ. 
ಚಿಕ್ಕಮಗಳೂರು

ರಾಜಗೋಪುರ, ಮಹಾದ್ವಾರ ಲೋಕಾರ್ಪಣೆ

ಬಾಳೆಹೊನ್ನೂರು: ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದ ನೂತನ ರಾಜಗೋಪುರ ಮತ್ತು ಮಹಾದ್ವಾರ ಲೋಕಾರ್ಪಣೆ ಶನಿವಾರ ಮತ್ತು ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಶನಿವಾರ ಸಂಜೆ ಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ, ಮಾತೃಕ ಪೂಜೆ, ರಾಕ್ಷೋಘ್ನ ಶಾಂತಿ, ನವಗ್ರಹ ಶಾಂತಿ, ವಾಸ್ತು ಶಾಂತಿ, ಅಧಿವಾಸ, ಪವಮಾನ, ವಾಯುಸ್ತುತಿ, ದಿಕ್ಪಾಲ ಬಲಿ ಪ್ರದಾನ, ಕಲಶ ಪ್ರತಿಷ್ಠೆ ಹಾಗೂ ಪಾರಾಯಣ ನಡೆಯಿತು.
ಭಾನುವಾರ ಬೆಳಗ್ಗೆ ಪ್ರತಿಷ್ಠಾಂಗ ಹೋಮ, ರಾಮನಾಮತಾರಕ ಹೋಮ, ಪವಮಾನ, ವಾಯುಸ್ತುತಿ, ಕಲಶಾಭಿಷೇಕ, ಮಹಾಪೂಜೆ ನಡೆಯಿತು. ಸಂಜೆ ಶೃಂಗೇರಿಯ ಹೆಬ್ಬಾಗಿಲು ಶ್ರೀ ಲಕ್ಷ್ಮೀ ವೆಂಕಟರಮಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ಪಟ್ಟಣ ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಭಕ್ತರು ರಾಜಗೋಪುರ, ಮಹಾದ್ವಾರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಗಂಧ ಪ್ರಸಾದ ಸ್ವೀಕರಿಸಿದರು. ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಡಿ.ಎನ್.ಜೀವರಾಜ್ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ, ಆಂಜನೇಯ ಸ್ವಾಮಿ ದೇವಸ್ಥಾನದಿಂದ ಗೌರವ ಸ್ವೀಕರಿಸಿದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.