ಕಳೆದ ವರ್ಷ ಮೈದುಂಬಿ ಹರಿದ ಕುಂತಿಹೊಳೆ ನೀರಿಲ್ಲದೇ ಬರಿದಾಗಿರುವುದು
ಪಂಚನಹಳ್ಳಿ: ಪ್ರತಿದಿನ ದಟ್ಟವಾದ ಮೋಡ ಕವಿದ ವಾತಾವರಣವಿದ್ದರೂ, ವರುಣನ ಆಗಮನದ ನಿರೀಕ್ಷೆ ಮೂಡಿದರೂ ಬಿರುಸು ಮಳೆ ಬರುತ್ತಿಲ್ಲ. ಒಂದೆರೆಡು ನಿಮಿಷ ತುಂತುರು ಮಳೆ ಬಂದರೂ ಮರದ ಎಲೆಯಿಂದ ಮಳೆ ನೀರು ಕೆಳಗೆ ಬೆಳುವಷ್ಟರಲ್ಲಿ ಮಾಯವಾಗಿ ನಿರಾಶೆ ಮೂಡಿಸುತ್ತಿದೆ. ಅದರೆ ರೈತರು ಮಾತ್ರ ಇಂದು ಅಥವಾ ನಾಳೆ ಉತ್ತಮ ಮಳೆ ಬಂದು ಕೆರೆ, ಕಟ್ಟೆಗಳಿಗೆ ನೀರು ಹರಿಯುವ ನಿರೀಕ್ಷೆಯಲ್ಲಿದ್ದಾರೆ.
ಕಡೂರು ತಾಲೂಕಿನಲ್ಲಿ ಬರದ ಛಾಯೆ ಅವರಿಸಿದೆ. ತಾಲೂಕಿನ ಕೃಷಿ ಭೂಮಿ ಸಂಪೂರ್ಣ, ಮಳೆ ಅಶ್ರಯವಾಗಿದ್ದು, ರೈತರು ತೋಟಗಾರಿಕೆ ಬೆಳೆಗಳಿಗೆ ಕೊಳವೆ ಬಾವಿಗಳ ಮೇಲೆ ಸಂಪೂರ್ಣ ಅವಲಂಬಿತಾರಾಗಿದ್ದಾರೆ. ಕೊಳವೆ ಬಾವಿಗಳಿಗೆ ಪುನಶ್ಚೇತನ ನೀಡುವಂತಹ ಕೆರೆ, ಕಟ್ಟೆಗಳಲ್ಲಿ ನೀರು ಸಂಪೂರ್ಣ ಬರಿದಾಗುತ್ತಿದ್ದು ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲಿ ನೀರಿಲ್ಲದಂತಾಗಿದೆ.
ಕೊಳವೆ ಬಾವಿಯನ್ನು ಅವಲಂಬಿಸಿರುವ ಬಯಲು ಭಾಗದ ತೆಂಗು, ಅಡಿಕೆ ಬೆಳೆಗಾರರಲ್ಲಿ ಅತಂಕ ಎದುರಾಗಿದೆ. ತಾಲೂಕಿನ ಕೃಷಿಗೆ ಜೀವ ನದಿಯಾಗಿರುವ ಮದಗದ ಕೆರೆ, ಅಯ್ಯನಕೆರೆಗಳೂ ಸಹ ನೀರಿಲ್ಲದೆ ಬತ್ತಿ ಹೋಗುತ್ತಿವೆ. ಅಂತರಗಟ್ಟೆ, ಕುಂದೂರು, ಸೂರಪುರ, ನೀಡುವಳ್ಳಿ ಕೆರೆಗಳಲ್ಲಿ ನೀರು ಇಲ್ಲದೆ ಜಾಲಿ ಗಿಡಗಳು ಬೆಳೆಯುತ್ತವೆ. ಕಳೆದ ವರ್ಷ ಮೈದುಂಬಿ ಹರಿಯುತ್ತಿದ್ದ ಕುಂತಿಹೊಳೆಯಲ್ಲಿಯೂ ನೀರಿಲ್ಲ. ಆಗಸ್ಟ್ ತಿಂಗಳು ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದರೂ ತಾಲೂಕಿನಲ್ಲಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೇ ಗ್ರಾಮೀಣ ಭಾಗದ ರೈತರ ಕೃಷಿಗೆ ಅಂತರ್ಜಲ ಜೀವನಾಡಿಯಂತೆ ಇರುವದು ಕೆರೆಗಳು ನೀರಿಲ್ಲದೆ ಸಂಪೂರ್ಣ ಬರಿದಾಗಿವೆ. ಕೆರೆಗಳಲ್ಲಿ ನೀರಿಲ್ಲದ ಪರಿಣಾಮ ಅಂತರ್ಜಲ ಮಟ್ಟ ಕುಸಿದು ರೈತರಲ್ಲಿ ತೆಂಗು, ಅಡಿಕೆ, ಮರಗಳನ್ನು ಕಳೆದು ಕೊಳ್ಳುವ ಭೀತಿ ಎದುರಾಗಿದೆ.