ಎನ್.ಆರ್.ಪುರದಲ್ಲಿ ಬಿಡಾಡಿ ಜಾನುವಾರುಗಳಿಗೆ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಪ್ರೀತಂ ನೇತೃತ್ವದಲ್ಲಿ ರೇಡಿಯಂ ಕಾಲರ್ ಅಳವಡಿಸಲಾಯಿತು. ಸುರಭಿರಾಜೇಂದ್ರ, ದ್ವಾರಮಕ್ಕಿ ಅಶ್ವನ್, ಕೆ.ಟಿ.ಮಂಜುನಾಥ್, ಪ್ರಸಾದ್ ಇತರರಿದ್ದರು.  
ಚಿಕ್ಕಮಗಳೂರು

ಜಾನುವಾರುಗಳಿಗೆ ರೇಡಿಯಕಾಲರ್ ಅವಳವಡಿಕೆ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • 23 ಜಾನುವಾರುಗಳಿಗೆ ರೇಡಿಯಂ ಕಾಲರ್ ಅವಳವಡಿಕೆ
  • ರಾತ್ರಿ ಸಮಯದಲ್ಲಿ ಜಾನುವಾರುಗಳು ಕಾಣದೆ ಅಪಘಾತ

ಎನ್.ಆರ್.ಪುರ: ಬಿಜೆಪಿ ಯುವ ಮೋರ್ಚಾ, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆಯಲ್ಲಿ ಓಡಾಡುತ್ತಿರುವ ಬಿಡಾಡಿ ಜಾನುವಾರುಗಳಿಗೆ ರೇಡಿಯಂ ಕಾಲರ್ ಅಳವಡಿಸಿದರು.

ಸೋಮವಾರ ರಾತ್ರಿ ಪಟ್ಟಣದ ಅಂಬೇಡ್ಕರ್ ವೃತ್ತ, ನಾಗಲಾಪುರ ಗ್ರಾಮದ ಮುಂಡೊಳ್ಳಿ, ಹೊಸಕೆರೆ, ಹೊನ್ನೇಕೊಡಿಗೆ ಗ್ರಾಪಂ ವರ್ಕಾಟೆ, ಹಂತುವಾನಿ ಮುಂತಾದ ಕಡೆ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಪ್ರೀತಂ ನೇತೃತ್ವದಲ್ಲಿ ಬಿಜೆಪಿ ನಗರ ಅಧ್ಯಕ್ಷ ಸುರಭಿರಾಜೇಂದ್ರ, ಬಿಜೆಪಿ ಮುಖಂಡರಾದ ಕೆ.ಟಿ.ಮಂಜುನಾಥ್, ದ್ವಾರಮಕ್ಕಿ ಅಶ್ವನ್, ಯುವ ಮೋರ್ಚಾದ ಪ್ರಸಾದ್ ಸೇರಿದಂತೆ 15 ಕ್ಕೂ ಹೆಚ್ಚು ಬಿಜೆಪಿ, ಬಜರಂಗದಳದ ಮುಖಂಡರು, ಕಾರ್ಯಕರ್ತರು ಸೇರಿ 23 ಜಾನುವಾರುಗಳಿಗೆ ರೇಡಿಯಂ ಕಾಲರ್ ಅಳವಡಿಸಿದರು.

 ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರೀತಂ ಸುದ್ದಿಗಾರರೊಂದಿಗೆ ಮಾತನಾಡಿ, ರಾತ್ರಿ ಸಮಯದಲ್ಲಿ ವಾಹನ ಚಲಾಯಿಸುವಾಗ ಜಾನುವಾರುಗಳು ಕಾಣದೆ ಅಪಘಾತವಾಗುತ್ತಿವೆೆ. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಡಿ.ಎನ್.ಜೀವರಾಜ್ ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷರ ಸೂಚನೆಯಂತೆ ಹಸುಗಳಿಗೆ ರೇಡಿಯಂ ಕಾಲರ್ ಅಳವಡಿಸಿದ್ದೇವೆ. ಇದರಿಂದ ವಾಹನಗಳ ಬೆಳಕು ಬಿದ್ದಾಗ ಹಸುಗಳು ಗೋಚರವಾಗಿ ಅಪಘಾತ ತಪ್ಪಲಿದೆ. ಮುಂದಿನ ದಿನಗಳಲ್ಲಿ ಶೃಂಗೇರಿ ಕ್ಷೇತ್ರದ ಎಲ್ಲ ಕಡೆ ಬಿಜಿಪಿ, ಬಜರಂಗದಳ ಹಾಗೂ ಸಂಘ ಪರಿವಾರದ ಸಹಕಾರದೊಂದಿಗೆ ಜಾನುವಾರುಗಳಿಗೆ ರೇಡಿಯಂ ಕಾಲರ್ ಅಳಡಿಸಲಾಗುವುದು ಎಂದು ತಿಳಿಸಿದರು.