ಬೀರೂರಿನ ರೈಲ್ವೆ ಸ್ಟೇಷನ್ ರಸ್ತೆಯ ಗ್ಯಾಸ್ ಏಜೆನ್ಸಿ ಮುಂದೆ ಇ-ಕೆವೈಸಿ ಮಾಡಿಸಲು ಗ್ರಾಹಕರು ಸರತಿ ಸಾಲಿನಲ್ಲಿ ನಿಂತಿರುವುದು. 
ಚಿಕ್ಕಮಗಳೂರು

ಎಲ್‌ಪಿಜಿ ಸಿಲಿಂಡರ್ ಇ-ಕೆವೈಸಿಗೆ ಸರತಿ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ಕಡೂರು, ಎಮ್ಮೆದೊಡ್ಡಿ
  • ಅನಿಲ ಸಂಪರ್ಕ ನೀಡಲಾಗಿದೆ
ಬೀರೂರು: ಎಲ್‌ಪಿಜಿ ಸಿಲಿಂಡರ್ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಅಗತ್ಯ ಇರುವ ಗ್ರಾಹಕರಿಗೆ ಗ್ಯಾಸ್ ಏಜೆನ್ಸಿಗಳು ಸೂಚನೆ ನೀಡುತ್ತಿದ್ದುದನ್ನು ತಪ್ಪಾಗಿ ಗ್ರಹಿಸಿದ ಗ್ರಾಹಕರು ಇ-ಕೆವೈಸಿ ಪೂರ್ಣಗೊಳಿಸಲು ಬುಧವಾರ ಏಜೆನ್ಸಿಗೆ ಮುಗಿಬಿದ್ದರು. ಅನಗತ್ಯವಾಗಿ ಎಲ್ಲ ಗ್ರಾಹಕರೂ ಬಂದಿದ್ದರಿಂದ ಇ-ಕೆವೈಸಿ ಮಾಡಿಸಬೇಕಾದವರಿಗೆ ತೊಂದರೆಯಾಯಿತು.
ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ರುದ್ರೇಶ್ ಗ್ಯಾಸ್ ಏಜೆನ್ಸಿಯಲ್ಲಿ ಭಾರತ್ ಗ್ಯಾಸ್‌ನ 16 ಸಾವಿರ ಸಂಪರ್ಕಗಳನ್ನು ಹೊಂದಲಾಗಿದೆ. ಬೀರೂರು, ಕಡೂರು, ಎಮ್ಮೆದೊಡ್ಡಿ, ಸಖರಾಯಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಅನಿಲ ಸಂಪರ್ಕ ನೀಡಲಾಗಿದೆ. ಕೆಲವೊಂದು ಸಂಪರ್ಕಗಳು ಮರಣ ಹೊಂದಿರುವವರ ಹೆಸರಿನಲ್ಲೇ ಚಾಲ್ತಿಯಲ್ಲಿವೆ. ದುಡಿಮೆಯನ್ನು ಅರಸಿ ಬೇರೆ ಊರುಗಳಲ್ಲಿ ನೆಲೆಸಿರುವವರೂ ಇ-ಕೆವೈಸಿ ಮಾಡಿಸಿಲ್ಲ. ಅಂಥವರಿಗೆ ಇ-ಕೆವೈಸಿ ಮಾಡಿಸಲು ಆ.15 ಕೊನೇ ದಿನ ಗಡುವು ನೀಡಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗಿದ್ದು, ಗ್ರಾಹಕರು ಈ ಸಂದೇಶವನ್ನು ತಪ್ಪಾಗಿ ಗ್ರಹಿಸಿ ಏಜೆನ್ಸಿ ಕಚೇರಿ ಮುಂದೆ ಜಮಾಯಿಸಿ ಸರತಿ ಸಾಲಿನಲ್ಲಿ ನಿಂತರು. ಇದರಿಂದ ವೃದ್ಧರು, ಮಹಿಳೆಯರು ಹಾಗೂ ದೂರದ ಗ್ರಾಮಗಳಿಂದ ಬರುವ ಗ್ರಾಹಕರು ತೊಂದರೆ ಅನುಭವಿಸುವಂತಾಯಿತು. ಕೆಲವರು ಕೆಲಸ ಬಿಟ್ಟು ಬಂದು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತರು. ಕೆಲವರು ನಾಮುಂದು ತಾಮುಂದು ಎಂದು ಜಗಳವಾಡಿದರು.
ರುದ್ರೇಶ್ ಗ್ಯಾಸ್ ಏಜೆನ್ಸಿ ಮಾಲೀಕ ಶಿವಪ್ರಕಾಶ್ ಮಾತನಾಡಿ, ಮರಣ ಹೊಂದಿದ ಮತ್ತು ಊರಿನಿಂದ ಹೊರಗಿರುವ ಗ್ರಾಹಕರು ಸೇರಿದಂತೆ ಒಂದು ಸಾವಿರ ಸಂಪರ್ಕಗಳಿಗೆ ಇ-ಕೆವೈಸಿ ಮಾಡಲಾಗುತ್ತಿದೆ. ಮರಣ ಹೊಂದಿದವರ ಹೆಸರು ತೆಗೆದು ಕುಟುಂಬಸ್ಥರ ಹೆಸರಿಗೆ ಇ-ಕೆವೈಸಿ ಮಾಡಲು ಬಹಳಷ್ಟು ಬಾರಿ ತಿಳಿಸಲಾಗಿತ್ತು. ಆದರೆ ಯಾರೂ ಬಂದಿರಲಿಲ್ಲ. ಕಡೇ ದಿನ ಎಂದು ಹೇಳಿದ ಕೂಡಲೇ ಕಚೇರಿಗೆ ಬರುತ್ತಿದ್ದಾರೆ. ಆದರೆ ಸಂಪರ್ಕ ಹೊಂದಿರುವ ಮತ್ತು ಈಗಾಗಲೇ ಇ-ಕೆವೈಸಿ ಆಗಿರುವವರೂ ಕಚೇರಿ ಮುಂದೆ ಜಮಾಯಿಸುತ್ತಿದ್ದಾರೆ. ಎಷ್ಟು ಹೇಳಿದರೂ ಕೇಳದ ಸ್ಥಿತಿಯಲ್ಲಿದ್ದಾರೆ ಎಂದರು.
ಪಟ್ಟಣದ ಆನಂದ್ ಮಾತನಾಡಿ, ಕೆವೈಸಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಕೆವೈಸಿಗೆ ಸಂಬಂಧಿಸಿದ ನಿಖರ ಮಾಹಿತಿ ಹಾಗೂ ಕೊನೆಯ ದಿನಾಂಕದ ಬಗ್ಗೆ ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ವಯಸ್ಸಾಗಿರುವವರ ಬೆರಳಚ್ಚು ಬರುವುದಿಲ್ಲ. ಅಂಥವರ ಇ-ಕೆವೈಸಿ ಮಾಡಲು ಸುಲಭ ವಿಧಾನ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.