ಕಳಸದ ಭದ್ರಾ ನದಿಯ ದಡ ಕೋಟಿ ತೀರ್ಥದಲ್ಲಿ ತ್ಯಾಜ್ಯ ಸುರಿದಿರುವುದು. 
ಚಿಕ್ಕಮಗಳೂರು

ಕೋಟಿ ತೀರ್ಥ ಅಪವಿತ್ರಮುಕ್ತಗೊಳಿಸಿ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ಭದ್ರಾ ನದಿ ದಡದಲ್ಲಿ
  • ತ್ಯಾಜ್ಯದ ರಾಶಿ
ಸುಧೀಶ್ ಸುವರ್ಣ ಕಳಸ
ಪಂಚ ತೀರ್ಥಗಳ ಪವಿತ್ರ ಪುಣ್ಯಕ್ಷೇತ್ರ, ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಕಲಶೇಶ್ವರ ಸ್ವಾಮಿಯ ನೆಲೆವೀಡು ತಾಲೂಕಿನ ಭದ್ರಾ ನದಿಯ ತೀರವೀಗ ತ್ಯಾಜ್ಯ ಸುರಿಯುವವರ ಕಪಿಮುಷ್ಟಿಗೆ ಸಿಲುಕಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಕೋಟಿ ತೀರ್ಥ ಎಂಬಲ್ಲಿ ಲೋಡುಗಟ್ಟಲೆ ಪ್ಲಾಸ್ಟಿಕ್ ಹಾಗೂ ಮದ್ಯದ ಬಾಟಲಿಗಳನ್ನು ತಂದು ಸುರಿದು ವಿಕೃತಿ ಮೆರೆಯಲಾಗಿದೆ.
ಧಾರ್ಮಿಕ ಶ್ರದ್ಧೆಯ ಕೇಂದ್ರವಾಗಬೇಕಿದ್ದ ನದಿ ತೀರ, ಕೆಲವರ ಬೇಜವಾಬ್ದಾರಿತನದಿಂದಾಗಿ ಡಂಪಿಂಗ್ ಯಾರ್ಡ್ ಆಗಿ ಮಾರ್ಪಡುತ್ತಿರುವುದು ಪರಿಸರ ಪ್ರೇಮಿಗಳ ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಕೋಟೆಹೊಳೆಯ ಭದ್ರಾ ನದಿ ತೀರ ಕೇವಲ ನದಿಯಲ್ಲ. ಅದೊಂದು ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರ. ಪ್ರತಿ ವರ್ಷ ಸಾರ್ವಜನಿಕ ಗಣೇಶೋತ್ಸವದ ಗಣಪತಿ ವಿಸರ್ಜನೆ, ದುರ್ಗಾ ಪೂಜೆಯ ಮೂರ್ತಿ ವಿಸರ್ಜನೆ ಹಾಗೂ ಶ್ರೀ ಕಲಶೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರುವುದೇ ಇದೇ ಜಾಗದಲ್ಲಿ. ಇಂಥ ಪವಿತ್ರ ಸ್ಥಳದಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಕೊಳೆತ ಆಹಾರ ಹಾಗೂ ಮದ್ಯದ ಬಾಟಲಿಗಳು ರಾಶಿ ಬಿದ್ದಿವೆ. ಪೂಜೆ ಸಲ್ಲಿಸಬೇಕಾದ ಜಾಗದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಡುಕರು ಕೂಡ ಇದೇ ಸ್ಥಳವನ್ನು ಮದ್ಯಸೇವನೆಯ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. ರಾತ್ರಿಯಾಗುತ್ತಿದ್ದಂತೆ ವಾಹನಗಳನ್ನು ತಂದು ನಿಲ್ಲಿಸಿಕೊಂಡು ಮದ್ಯ ಸೇವನೆ ಮಾಡಿ ಬಾಟಲಿಗಳನ್ನು ನದಿಗೆ ಎಸೆಯುತ್ತಾರೆ. ಪ್ರವಾಸಿಗರೂ ಇಲ್ಲಿ ಮದ್ಯ ಸೇವಿಸಿ ಬಾಟಲಿಗಳನ್ನು ಎಸೆದು ಹೋಗುತ್ತಾರೆ.
ಇಲ್ಲಿ ಕಳಸ ಗ್ರಾಪಂನಿಂದ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಒಂದು ಟಿಪ್ಪರ್ ಹಾಗೂ ಒಂದು ಗೂಡ್ಸ್ ವಾಹನದಲ್ಲಿ  ಮನೆ ಮನೆಗೆ ಬಂದು ಕಸ ಸಂಗ್ರಹಿಸಲಾಗುತ್ತದೆ. ಸಾರ್ವಜನಿಕರಲ್ಲಿ ಹೆಚ್ಚುವರಿ ಒಣ ಅಥವಾ ಹಸಿ ತ್ಯಾಜ್ಯವಿದ್ದರೆ ಅದನ್ನು ನೇರವಾಗಿ ಪಂಚಾಯಿತಿಯ ತ್ಯಾಜ್ಯ ಘಟಕಕ್ಕೆ ತಂದು ಸುರಿಯಲು ಮುಕ್ತ ಅವಕಾಶವನ್ನೂ ಕಲ್ಪಿಸಿಕೊಡಲಾಗಿದೆ. ಇಂಥ ಎಲ್ಲ ಸೌಲಭ್ಯಗಳಿದ್ದರೂ  ಸೋಮಾರಿತನ ಮತ್ತು ಪರಿಸರ ಪ್ರಜ್ಞೆ ಕೊರತೆಯಿಂದಾಗಿ ಕೆಲವರು ಕತ್ತಲಾಗುತ್ತಿದ್ದಂತೆ ವಾಹನಗಳಲ್ಲಿ ಕಸ ತಂದು ನದಿಯ ದಡಕ್ಕೆ ಸುರಿಯುತ್ತಿದ್ದಾರೆ. 
ಕಸ ಸುರಿಯುವ ಪ್ರಮುಖ ಜಾಗಗಳನ್ನು ಗುರುತಿಸಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ರಾತ್ರಿ ವೇಳೆ ಇಲ್ಲಿ ಕಸ ತಂದು ಸುರಿಯುವ ವಿಕೃತರನ್ನು ಪತ್ತೆಹಚ್ಚಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮತ್ತು ಭಾರಿ ದಂಡ ವಿಸಬೇಕು.ಪೊಲೀಸರು ಈ ಭಾಗದಲ್ಲಿ ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನದಿಯನ್ನು ದೇವರು ಎಂದು ಪೂಜಿಸುವವರ ನಡುವೆ, ನದಿಯನ್ನೇ ಕಸದ ತೊಟ್ಟಿ ಮಾಡುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂಥ ಸಂಗತಿ. ಅಧಿಕಾರಿಗಳು ಎಚ್ಚೆತ್ತುಕೊಂಡು, ಕೋಟಿ ತೀರ್ಥವನ್ನು ಮಾಲಿನ್ಯಮುಕ್ತಗೊಳಿಸಬೇಕು.
ಕಲುಷಿತಗೊಳ್ಳುತ್ತಿರುವುದು ಕೇವಲ ಕಳಸದ ನದಿ ತೀರ ಮಾತ್ರವಲ್ಲ, ಪೂರ್ಣ ನದಿ ಹರಿವನ್ನೇ. ಭದ್ರಾ ನದಿಯ ನೀರು ಮುಂದೆ ಸಾಗಿ ಬಯಲುಸೀಮೆಗಳ ಜೀವನಾಡಿಯಾದ ಲಕ್ಕವಳ್ಳಿ ಭದ್ರಾ ಜಲಾಶಯವನ್ನು ಸೇರುತ್ತದೆ. ಈ ನೀರನ್ನು ಕೃಷಿಗೆ ಹಾಗೂ ಕುಡಿಯಲು ಕೋಟ್ಯಾಂತರ ಜನ ಅವಲಂಬಿಸಿದ್ದಾರೆ. ಸ್ಥಳೀಯವಾಗಿಯೂ ಇದೇ ನೀರನ್ನು ಬಳಸುತ್ತಿದ್ದಾರೆ. ಪವಿತ್ರ ಜಲಮೂಲಕ್ಕೆ ವಿಷ ಉಣಿಸುವ ಇಂಥ ಕೃತ್ಯಗಳು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿವೆ. ನದಿ ತೀರದಲ್ಲಿ ಸುರಿಯುವ ತ್ಯಾಜ್ಯದಲ್ಲಿ ಮದ್ಯದ ಬಾಟಲಿಗಳನ್ನು ಒಡೆದು ಹಾಕಲಾಗಿದೆ. ಆಹಾರ ಹುಡುಕಿಕೊಂಡು ಬರುವ ಬೀದಿ ನಾಯಿಗಳು, ಹಸುಗಳು ಇತರ ಜಾನುವಾರುಗಳು ಈ ಕಸವನ್ನು ತಿನ್ನುತ್ತಿವೆ. ಈ ಸಂದರ್ಭದಲ್ಲಿ ಒಡೆದ ಗಾಜಿನ ಚೂರುಗಳು ಪ್ರಾಣಿಗಳ ಬಾಯಿ ಹಾಗೂ ಕಾಲಿಗೆ ಚುಚ್ಚಿ ತೀವ್ರ ರಕ್ತಸ್ರಾವವಾಗಿ, ಅವುಗಳ ಜೀವಕ್ಕೇ ಕಂಟಕ ಎದುರಾದ ನಿದರ್ಶನವಿದೆ.