ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದಲ್ಲಿ ಹರಿಯುವ ಜಪಾವತಿ ನದಿಗೆ ಕೆಲ ತೋಟದ ಮಾಲೀಕರು ಕಾಫಿ ಸಂಸ್ಕರಿಸಿದ ಪಲ್ಪರ್ ನೀರು ಹರಿಯಲು ಬಿಟ್ಟು ನದಿಯನ್ನು ಮಲಿನಗೊಳಿಸಿರುವುದು.
ಮೂಡಿಗೆರೆ: ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಗಡಿ ಭಾಗದಲ್ಲಿ ಹರಿಯುತ್ತಿರುವ ಜಪಾವತಿ ನದಿಗೆ ಕಾಫಿ ಸಂಸ್ಕರಿಸಿದ ಪಲ್ಪರ್ ನೀರು ಹರಿಯ ಬಿಡುತ್ತಿರುವುದರಿಂದ ನದಿ ಮಲಿನವಾಗಿದೆ. ಇದರಿಂದ ಕಿರುಗುಂದ, ಉದುಸೆ, ಹೊತ್ತಿಕೆರೆ, ಹೆಗ್ಗರವಳ್ಳಿ, ಚೆಕ್ಕುಡಿಗೆ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಸಂಚಕಾರ ಉಂಟಾಗಿದೆ. ನದಿಯ ಜಲಚರಗಳು ನಾಶವಾಗುತ್ತಿದ್ದು ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ.
ಪಶ್ಚಿಮಘಟ್ಟದ ತಪ್ಪಲಿನಿಂದ ಉಗಮವಾಗಿರುವ ಜಪಾವತಿ ನದಿ ದೇವರುಂದ, ಕನ್ನೇಹಳ್ಳಿ, ಕಜ್ಜಿಹಳ್ಳಿ, ಕಿರುಗುಂದ, ಉದುಸೆ ಗ್ರಾಮದ ಮೂಲಕ ಹರಿದು ಹೆಗ್ಗರವಳ್ಳಿ ಗ್ರಾಮದಲ್ಲಿ ಹೇಮಾವತಿ ನದಿಯೊಂದಿಗೆ ವಿಲೀನವಾಗುತ್ತದೆ. ಮೂಡಿಗೆರೆ ಮತ್ತು ಸಕಲೇಶಪುರ ತಾಲೂಕಿನ ಗಡಿಯ ಉದ್ದಕ್ಕೂ ಈ ನದಿ ಹರಿಯುತ್ತದೆ. ಈ ನದಿಗೆ ನಾಲ್ಕೈದು ದಿನದಿಂದ ಕಾಫಿ ಸಂಸ್ಕರಿಸಿದ ಪಲ್ಪರ್ ತ್ಯಾಜ್ಯದೊಂದಿಗೆ ಕೊಳಚೆ ನೀರನ್ನು ಹರಿಸಲಾಗುತ್ತಿದೆ. ಯಾವ ತೋಟದ ಮಾಲೀಕರು ಕಾಫಿ ಸಂಸ್ಕರಿಸಿದ ಕೊಳಚೆ ನೀರನ್ನು ಬಿಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ.
ನದಿಯ ನೀರು ಸಂಪೂರ್ಣ ಮಲಿನಗೊಂಡಿರುವುದರಿಂದ ಕಿರುಗುಂದ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ. ಜಪಾವತಿ ನದಿ ದಡದಲ್ಲಿ ಕಿರುಗುಂದ ಗ್ರಾಪಂನಿಂದ ಅಲ್ಲಲ್ಲಿ ಬಾವಿ ನಿರ್ಮಿಸಿ ಅದಕ್ಕೆ ನದಿಯಿಂದ ಪೈಪ್ ಅಳವಡಿಸಿ ಬಾವಿಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ನದಿಯಿಂದ ಬಾವಿಗೆ ನೀರು ಅರಿಯುವ ವ್ಯವಸ್ಥೆ ಮಾಡಲಾಗಿದೆ. ಈಗ ಬಾವಿಯಲ್ಲಿ ಕೊಳಚೆ ನೀರು ತುಂಬಿಕೊಂಡಿದೆ. ಹಾಗಾಗಿ ಗ್ರಾಮಸ್ಥರಿಗೆ ಗ್ರಾಪಂನಿಂದ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.
ಪ್ರತಿ ವರ್ಷ ಜಪಾವತಿ ನದಿಗೆ ಕಾಫಿ ಸಂಸ್ಕರಿಸಿದ ಪಲ್ಪರ್ ನೀರು ಹರಿಯ ಬಿಡುವುದು ಸಾಮಾನ್ಯವಾಗಿದೆ. ಕಳೆದ ವರ್ಷ ಈ ಬಗ್ಗೆ ಸ್ಥಳೀಯರು ನೀಡಿದ ದೂರಿನಂತೆ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪಲ್ಪರ್ ನೀರು ಹರಿಯ ಬಿಡುವವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಇದುವರೆಗೂ ಯಾವ ತೋಟದ ಮಾಲೀಕರ ವಿರುದ್ಧವೂ ಕ್ರಮ ಕೈಗೊಂಡಿಲ್ಲ.